ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಟ ಗಣೇಶ್ ಗೆ ಸಂಕಷ್ಟ ಎದುರಾಗಿದ್ದು, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತಿದ್ದು, ಇದೀಗ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದಾರೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ನಟ ಗಣೇಶ್ ಗೆ ಎಸಿಎಫ್ ವರದಿ ಅನ್ವಯ ನೋಟಿಸ್ ಕೊಟ್ಟಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ನಟ ಗಣೇಶ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಾಸ ಮತ್ತು ಕೃಷಿ ಉದ್ದೇಶದಿಂದ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಬೃಹತ್ ಕಟ್ಟಡ ನಿರ್ಮಿಸುತ್ತಿರುವ ಆರೋಪ ಕೇಳಿ ಬಂದಿದೆ. ಕಟ್ಟಡ ನಿರ್ಮಾಣಕ್ಕೆ ದೊಡ್ಡ ಗಾತ್ರದ ಕಾಂಕ್ರೀಟ್ ಪಿಲ್ಲರ್ ಗಳನ್ನು ಹಾಕಲಾಗಿದ್ದು, ಜೆಸಿಬಿ ಬಳಕೆ ಮಾಡಲಾಗಿದೆ. ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ.
ಗುಂಡ್ಲುಪೇಟೆ ತಾಲೂಕು ಹಂಗಳ ಹೋಬಳಿ ಜಕ್ಕಳ್ಳಿಯಲ್ಲಿ ಒಂದು ಎಕರೆ 24 ಗುಂಟೆ ಜಮೀನಿದ್ದು, ವಾಸದ ಮನೆ ಮತ್ತು ತೋಟಗಾರಿಕೆ ಉದ್ದೇಶದಿಂದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಗಣೇಶ್ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.