Thursday, September 25, 2025

ಎಸ್‌.ಎಲ್ ಭೈರಪ್ಪನವರ ಸ್ಮಾರಕ ನಿರ್ಮಾಣ:‌ ಅಂತಿಮ ದರುಶನದ ಬಳಿಕ ಸಿಎಂ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಡಿನ ಹಿರಿಯ ಸಾಹಿತಿ ಸರಸ್ವತಿ ಸಮ್ಮಾನ್, ಪದ್ಮ ವಿಭೂಷಣ ಡಾ ಎಸ್ ಎಲ್ ಭೈರಪ್ಪನವರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಡಾ ಎಸ್ ಎಲ್ ಭೈರಪ್ಪ ಅವರ ಅಂತಿಮ ದರುಶನ ಪಡೆದು ಪಾರ್ಥಿವ ಶರೀರಕ್ಕೆ ನಮಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಭೈರಪ್ಪ ಅವರು ಹೆಚ್ಚು ಸಮಯಗಳ ಕಾಲ ಮೈಸೂರಿನಲ್ಲಿಯೇ ಇದ್ದರು. ಮೈಸೂರು ಅವರ ನೆಚ್ಚಿನ ಸ್ಥಳ, ಹೀಗಾಗಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸಲಾಗುವುದು ಎಂದರು. ಇದಕ್ಕೂ ಮುನ್ನ ಭೈರಪ್ಪನವರ ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಸಿಎಂ ಮಾತುಕತೆ ನಡೆಸಿದರು.

ಭೈರಪ್ಪನವರ ಕೆಲವು ಕೃತಿಗಳನ್ನು ನಾನು ಓದಿದ್ದೇನೆ. ನನ್ನ ನೆಚ್ಚಿನ ಬರಹಗಾರರು ಅವರು, ಅವರ ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಯಾವ ಸಾಹಿತಿಯ ಯಾವ ಕೃತಿಗಳೂ ಇಷ್ಟು ಭಾಷೆಗೆ ಅನುವಾದಗೊಂಡಿಲ್ಲ ಎಂದರು.

ಅವರಿಗೆ ಸರಸ್ವತಿ ಸಮ್ಮಾನ್, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಬಂದಿದ್ದವು. ಜ್ಞಾನಪೀಠ ಪ್ರಶಸ್ತಿಯೂ ಅವರಿಗೆ ಬರಬೇಕಿತ್ತು, ಅದಕ್ಕೆ ಅವರು ಅರ್ಹರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ, ಚಿಂತನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ ನಂಬಿದ್ದ ವಿಚಾರಕ್ಕೆ ಬದ್ಧರಾಗಿ ಬರೆದವರು ಭೈರಪ್ಪನವರು. ಆತ್ಮತೃಪ್ತಿಗೆ ಕಾದಂಬರಿ ಬರೆಯುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಕಷ್ಟಪಟ್ಟು ಬದುಕಿನಲ್ಲಿ ಮೇಲೆ ಬಂದಿದ್ದರು. ಅನೇಕರು ಅವರಿಗೆ ಅಭಿಮಾನಿಗಳು, ಓದುಗರಾಗಿದ್ದಾರೆ ಎಂದರು.

ಇದನ್ನೂ ಓದಿ