ಹೊಸದಿಗಂತ ವರದಿ ಹುಬ್ಬಳ್ಳಿ:
ಗೋ ನಲ್ಲಿ ೩೩ ಸಾವಿರ ದೇವಾನು ದೇವತೆಗಳಿದ್ದು, ಅದರ ಹಾಲಿನಲ್ಲಿ ಪೌಷ್ಟಿಕಾಂಶ ಹಾಗೂ ಗೋ ಮೂತ್ರದಲ್ಲಿ ಪರಿಶುದ್ಧತೆ ದೊರೆಯಲಿದೆ. ಗೋ ಉತ್ಪನ್ನಗಳ ಬಳಸುವುದರಿಂದ ಮನುಷ್ಯನ ಜೀವನ ಪರಿವರ್ತನೆಯಾಗಲಿದೆ ಎಂದು ಗೋ ಸೇವಾ ಗತಿವಿಧಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ರಾಘವನ್ ಹೇಳಿದರು.
ಇಲ್ಲಿಯ ಗೋಕುಲ ರಸ್ತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಕೇಶವ ಕುಂಜದಲ್ಲಿ ಗೋ ಸೇವಾ ಗತಿವಿಧಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ನಗರ ಜೀವನದಲ್ಲಿ ಗೋವಿನ ಪಾತ್ರ ವಿಷಯದ ಗೋ ಮಹಿಮಾ ಕುರಿತು ಉಪನ್ಯಾಸ ಮಾಡಿದರು.
ಗೋವು ಸಾಮಾನ್ಯವಾದ ಪ್ರಾಣಿಯಲ್ಲ. ಅದು ಜಗತ್ತಿನ ಒಂದು ಅದ್ಭುತವಾಗಿದೆ. ಗೋ ಹಾಗೂ ಅದರ ಉತ್ಪನ್ನಗಳ ಮಹತ್ವ ತಿಳಿಸಲು ಗೋ ಸೇವಾ ಗತಿವಿಧಿಯಿಂದ ಮನೆ ಮನೆಯಲ್ಲಿ ಗೋವು, ಪ್ರತಿ ಮನೆಯಲ್ಲಿ ಹಾಲು ಎಂಬ ಅಭಿಯಾನ ಮಾಡಲಾಗುತ್ತಿದೆ ಎಂದರು.
ಗೋ ದೇಶ ಸಂಸ್ಕೃತಿ ಪ್ರತಿಕವಾಗಿದೆ. ಗೋ ಪೂಜಿಸುವುದರಿಂದ ಸಮೃದ್ಧಿ ಪ್ರಾಪ್ತಿಯಾಗಲಿದೆ. ಗೋ ರಕ್ಷಣೆಯಿಂದ ಮನುಷ್ಯನ ಕಷ್ಟಗಳು ದೂರವಾಗಿ, ಸುಖ ದೊರೆಯಲಿದೆ. ಮೊದಲು ನಮ್ಮ ಕುಟುಂಬ, ನಮ್ಮ ಮನೆಯ ಹೆಣ್ಣು ಮಕ್ಕಳ ರಕ್ಷಸಬೇಕು. ಆಗ ಮಾತ್ರ ದೇಶ ರಕ್ಷಿಸಲು ಸಾಧ್ಯ. ಸರಿ- ತಪ್ಪು ಅರಿಯುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಬಿ. ಗಣಪತಿ ಮಾತನಾಡಿ, ಮನೆಯಲ್ಲಿ ಮಾತೇಯರು ಮಕ್ಕಳಿಗೆ ದೇಶದ ಸಂಸ್ಕೃತಿ, ಪರಂಪರೆ, ಕುಟುಂಬ ವ್ಯವಸ್ಥೆ ಹಾಗೂ ಗೋವುಗಳ ಬಗ್ಗೆ ತಿಳಿಸಿಕೊಡಬೇಕು. ಅಂದಾಗ ಮಾತ್ರ ದೇಶ ಸಂಸ್ಕೃತಿ ಹಾಗೂ ಗೋವುಗಳ ರಕ್ಷಿಸಲು ಸಾಧ್ಯ ಎಂದರು.
ವಿಶ್ವದ ಭಾರತದಲ್ಲಿ ಮಾತ್ರ ದೇಶಿ ಗೋವುಗಳನ್ನು ನೋಡಲು ಸಾಧ್ಯ. ದೇಶ ಪ್ರತಿಯೊಬ್ಬ ಮನುಷ್ಯನ ಕಣ ಕಣದಲ್ಲಿಯೂ ಧರ್ಮ ಪ್ರಜ್ಞೆ ಹಾಗೂ ಇತರರಿಗೆ ಪಾಠ ಮಾಡುವ ಶಕ್ತಿ ಇದೆ. ಆದ್ದರಿಂದ ಭಾರತವನ್ನು ವಿಶ್ವ ಗುರು ಎನ್ನಲಾಗುತ್ತಿದೆ ಎಂದು ಹೇಳಿದರು.
ಗೋವುಗಳ ಗತಿ ಏನಾಗಿದೆ ಎಂಬುವುದರ ಬಗ್ಗೆ ಅರ್ಥ ಮಾಡಿಕೊಂಡರೆ, ಏನು ವಿಧಿ ಮಾಡಬೇಕಾಗುತ್ತದೆ ಎಂಬುವುದು ಗೊತ್ತಾಗುತ್ತದೆ. ಹಳ್ಳಿ, ಪಟ್ಟಣದಲ್ಲಿ ಗೋವುಗಳ ಸ್ಥಿತಿ ಕರಳು ಕಿತ್ತು ಬರುತ್ತದೆ. ನಗರ ಪ್ರದೇಶದಲ್ಲಿ ಬೀದಿಗೆ ಬಿಡಲಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತು ತಿದ್ದು ನರಳುತ್ತಿವೆ. ಬೀದಿ ಗೋವುಗಳ ನೋಡುವ ಕಾರ್ಯ ತಕ್ಷಣ ಆಗಬೇಕಿದೆ. ದೇಶದಲ್ಲಿ ಅಸುರಕ್ಷಿತವಾಗಿ ಬದುಕುತ್ತಿರುವ ಗೋವುಗಳ ರಕ್ಷಿಸಬೇಕಿದೆ ಎಂದು ಹೇಳಿದರು.
ದೇಶ ಸಂಸ್ಕೃತಿ ಬಗ್ಗೆ ನಾವು ಅರ್ಥ ಮಾಡಿಕೊಂಡಿಲ್ಲ. ಪ್ರಧಾನಿ ಮೋದಿ ಅವರು ದೇಶಕ್ಕೆ ಪ್ರಧಾನಿ ಯಾಗದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಗೋ ರಕ್ಷಣೆಗೆ ಕಾನೂನು ತರಲಾಗುತ್ತಿದೆ. ಆದರೆ ಜಾರಿಗೆ ತರಲು ಪಕ್ಷಪಾತ ಮಾಡಲಾಗುತ್ತಿದೆ. ದೇಶಿ ತಳಿಗಳ ನಾಶವಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರದ ವಿರುದ್ಧ ಹೋರಾಟ ಮಾಡಲು ಬದಲು ಗೋವುಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಮಹಾನಗರದ ಮಾತೆಯರ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಘಚಾಲಕ
ಗೋವಿಂದಪ್ಪ ಗೌಡಪ್ಪಗೋಳ, ದತ್ತಾತ್ರೇಯ ಭಟ್ ಇದ್ದರು.



