ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದ ಅಸಲಿ ಕಾರಣ ಈಗ ಬಯಲಾಗಿದೆ. ನಿರಂತರವಾಗಿ ಬಲೂನ್‌ಗಳಿಗೆ ಗ್ಯಾಸ್ ತುಂಬುವ ಭರದಲ್ಲಿ ವ್ಯಾಪಾರಿ ಸಲೀಂ ಮಾಡಿದ್ದ ಸಣ್ಣ ತಾಂತ್ರಿಕ ನಿರ್ಲಕ್ಷ್ಯವೇ ಈ ಭೀಕರ ದುರಂತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಫೋಟಕ್ಕೆ ಕಾರಣವೇನು?
ಪೊಲೀಸ್ ಮೂಲಗಳ ಪ್ರಕಾರ, ಸಲೀಂ ಬಲೂನ್‌ಗಳಿಗೆ ವೇಗವಾಗಿ ಗ್ಯಾಸ್ ತುಂಬಲು ಸಿಲಿಂಡರ್ ಅನ್ನು ಪದೇ ಪದೇ ‘ಆನ್ ಮತ್ತು ಆಫ್’ ಮಾಡುತ್ತಿದ್ದ. ಈ ಪ್ರಕ್ರಿಯೆಯಿಂದಾಗಿ ಸಿಲಿಂಡರ್‌ನ ಒಳಭಾಗದಲ್ಲಿ ಅತಿಯಾದ ಉಷ್ಣತೆ ಉತ್ಪತ್ತಿಯಾಗಿ, ಒತ್ತಡ ತಡೆದುಕೊಳ್ಳಲಾಗದೆ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಉತ್ತರ ಪ್ರದೇಶ ಮೂಲದ ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುತ್ತಮುತ್ತಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ದಿನ ರಾತ್ರಿ 8.30ರ ಸುಮಾರಿಗೆ ಸಲೀಂ ವರಾಹ ಗೇಟ್ ಬಳಿ ವ್ಯಾಪಾರ ಮುಗಿಸಿ ಜಯಮಾರ್ತಾಂಡ ಗೇಟ್ ಬಳಿ ಬಂದಿದ್ದ. ಇಲ್ಲಿ ಪ್ರವಾಸಿಗರ ದಟ್ಟಣೆ ಅಧಿಕವಾಗಿರುತ್ತದೆ. ಒಂದು ವೇಳೆ ಇಲ್ಲೇ ಸ್ಫೋಟ ಸಂಭವಿಸಿದ್ದರೆ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿತ್ತು. ಕಡಿಮೆ ಜನಸಂದಣಿ ಇದ್ದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.
ದುರಂತದಲ್ಲಿ ಗಾಯಗೊಂಡ ನಾಲ್ವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಒಬ್ಬರು ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಹಾಗೂ ಮೂವರು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಸಿಲಿಂಡರ್‌ನ ಗುಣಮಟ್ಟ, ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಸಲೀಂ ಬಳಿ ಇದ್ದ ವ್ಯಾಪಾರ ಪರವಾನಗಿಗಳ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ.

