ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾಮರಾನಗರದ ನಂಜೆದೇವಪುರದಲ್ಲಿ ಕಾಣಿಸಿಕೊಂಡಿರುವ 5 ಹುಲಿಗಳನ್ನು ಸುರಕ್ಷಿತವಾಗಿ ರಕ್ಷಿಸಲು ಮೊದಲಿಗೆ ಬೋನುಗಳನ್ನು ಅಳವಡಿಸಲು ಮತ್ತು ಅಗತ್ಯ ಬಿದ್ದರೆ ಅರವಳಿಕೆ ನೀಡಿ ಸೆರೆ ಹಿಡಿಯಲು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಅವರು, ಹುಲಿಗಳು ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡಿರುವ ಕಾರಣ ಜನರು ಭಯಭೀತರಾಗಿದ್ದು, ಅಮೂಲ್ಯವಾದ ಜೀವಹಾನಿ ಆಗದ ರೀತಿಯಲ್ಲಿ ಮತ್ತು ವನ್ಯಜೀವಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಹುಲಿಗಳ ಚಲನವಲನದ ಮೇಲೆ ಸತತ ನಿಗಾ ಇಡುವುದು ಅತ್ಯಗತ್ಯವಾಗಿದ್ದು, ಡ್ರೋನ್ ಕ್ಯಾಮೆರಾಗಳು, ಥರ್ಮಲ್ ಕ್ಯಾಮೆರಾಗಳನ್ನು ಬಳಸಿ ಹುಲಿಗಳು ಎಲ್ಲಿವೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಗ್ರಾಮಗಳಿಗೆ ಬಂದರೆ ಗ್ರಾಮಸ್ಥರಿಗೆ ಕೂಡಲೇ ಮಾಹಿತಿ ನೀಡಬೇಕು. ಅಲ್ಲಿಗೆ ಅರಣ್ಯ ಇಲಾಖೆಯ ತಂಡಗಳನ್ನು ಕಳುಹಿಸಿ ಯಾವುದೇ ಅನಾಹುತ ಆಗದಂತೆ ಕ್ರಮ ವಹಿಸಬೇಕು ಎಂದರು.
ಹುಲಿಗಳನ್ನು ಹಿಡಿಯುವಾಗ ಹುಲಿಗಳು ಕಾರ್ಯಾಚರಣೆ ತಂಡದ ಮೇಲೆ ದಾಳಿ ಮಾಡದಂತೆ ಮತ್ತು ಬಡಗಲಪುರದಲ್ಲಿ ಹುಲಿ ರಕ್ಷಣೆ ಕಾರ್ಯಾಚರಣೆ ವೇಳೆ ವ್ಯಕ್ತಿಯ ಮೇಲೆ ದಾಳಿ ಆದಂತಹ ಪ್ರಕರಣಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ತಿಳಿಸಿದರು.
5 ಹುಲಿಗಳ ರಕ್ಷಣೆ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಸಲಕರಣೆ, ಹೆಚ್ಚುವರಿ ಪಶುವೈದ್ಯರು, ಶಾರ್ಪ್ ಶೂಟರ್‌ಗಳನ್ನು ಸಹ ನಿಯೋಜನೆ ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣವೇ ತರಿಸಿಕೊಳ್ಳುವಂತೆಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟವಾಗಿ ತಿಳಿಸಿದರು.

