ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರ ಮತ್ತೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಾರ್ಚ್ 5ರೊಳಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಗಡುವು ನೀಡಿರುವ ಬೆನ್ನಲ್ಲೇ, ಈ ಸಮಸ್ಯೆಗೆ ಕಾರಣ ಹಿಂದಿನ ಬಿಜೆಪಿ ಸರ್ಕಾರವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಆಡಳಿತದ ಅವಧಿಯಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸದೇ ಉಳಿಸಿದ ಪರಿಣಾಮ ಬಾಕಿ ಮೊತ್ತ ಹೆಚ್ಚಾಗಿದೆ. ಆಗಿನ ಸರ್ಕಾರ ಜವಾಬ್ದಾರಿ ನಿರ್ವಹಿಸದೇ ಹೋದ ಕಾರಣ ಇಂದಿನ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿ ಮಾಡಿದೆ ಎಂದು ಆರೋಪಿಸಿದರು. ನಗರಾಭಿವೃದ್ಧಿ, ವಸತಿ, ಅಬಕಾರಿ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಅವರು ಟೀಕಿಸಿದರು.
37,370 ಕೋಟಿ ರೂ. ಗುತ್ತಿಗೆದಾರರ ಬಿಲ್ ಇನ್ನೂ ಬಿಡುಗಡೆ ಆಗಿಲ್ಲ ಎಂಬುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ವಿಜಯೇಂದ್ರ ಹೇಳಿದರು. ಹಣ ಬಿಡುಗಡೆ ಮಾಡುವ ಭರವಸೆ ನೀಡಿ ಅನುಷ್ಠಾನಗೊಳಿಸದ ಕಾರಣ ಗುತ್ತಿಗೆದಾರರು ಆಕ್ರೋಶಕ್ಕೆ ತಲುಪಿದ್ದಾರೆ ಎಂದು ಆಕ್ಷೇಪಿಸಿದರು.



