ಹೊಸದಿಗಂತ ಮಡಿಕೇರಿ:
ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಗುತ್ತಿಗೆದಾರ ಸಂಪತ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಪೊಲೀಸರು ಓರ್ವ ಮಹಿಳೆ ಸಹಿತ ಮೂವರನ್ನು ಬಂಧಿಸಿದ್ದಾರೆ.
ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ (44) ಕಿರಣ್ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ. ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ.
ವೈಯಕ್ತಿಕ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಈ ಕೊಲೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭಾನುವಾರ ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಾನು ಪಡೆದಿರುವ ಸಾಲವನ್ನು ಮರುಪಾವತಿಸಿಸುವುದಾಗಿ ನಂಬಿಸಿ, ಆರೋಪಿ ಸಂಗೀತಾ ಮೇ 9ರಂದು ಸಂಪತ್ ನಾಯರ್’ನನ್ನು ಸೋಮವಾರಪೇಟೆಯ ಹಾನಗಲ್’ಗೆ ಮೇ ಬರಮಾಡಿಕೊಂಡು, ತನ್ನ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಮೂಲಕ ಕೋವಿಯಿಂದ ಬೆದರಿಸಿ ದೊಣ್ಣೆಯಿಂದ, ಹೊಡೆದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಕೊಲೆಯನ್ನು ಮರೆಮಾಚಲು ಮೃತ ದೇಹವನ್ನು, ಸಂಪತ್ ನಾಯರ್ ಬಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರ ತಾಲೂಕಿನ ಒಳಗೂರು ಅರಣ್ಯದಲ್ಲಿ ಬಿಸಾಡಿ, ಕಾರನ್ನು ಕಲ್ಲಳ್ಳಿ ಬಳಿ ನಿಲ್ಲಿಸಿ, ಈ ಕೃತ್ಯಕ್ಕೆಂದು ಬೆಂಗಳೂರಿನಿಂದ ತಂದಿದ್ದ ಮತ್ತೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು.
ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಆಧಾರದಲ್ಲಿ ಕಿರಣನನ್ನು ಬೆಂಗಳೂರಿನಲ್ಲಿ ಬಂಧಿಸಿದ ಪೊಲೀಸರು, ಆರೋಪಿ ಗಣಪತಿಯನ್ನು 17ರಂದು ಬೆಳ್ತಂಗಡಿಯಲ್ಲಿ ಮತ್ತು ಮೇ 18ರಂದು ಕಿರಣನ ಹೆಂಡತಿ ಸಂಗೀತತಾನ್ನು ಸೋಮವಾರಪೇಟೆಯಲ್ಲಿ ಬಂಧಿಸಿರುವುದಾಗಿ ರಾಮರಾಜನ್ ವಿವರಿಸಿದರು.
ಆರೋಪಿಗಳನ್ನು ವಿಚಾರಣೆ ನಡೆದಾಗ ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡು ಘಟನೆಯ ಬಗ್ಗೆ ವಿವರ ನೀಡಿದ್ದು, ಈ ಕೃತ್ಯಕ್ಕೆ ಬಳಸಲಾದ ದೊಣ್ಣೆ, ಕತ್ತಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ..
ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಇತರರನ್ನು ಕೂಡಾ ಸದ್ಯದಲ್ಲೇ ಬಂಧಿಸಲಾಗುವುದು ಎಂದು ಅವರು ನುಡಿದರು. ಕಿರಣ್, ಗಣಪತಿ, ಸಂಪತ್ ನಾಯರ್ ಸ್ನೇಹಿತರಾಗಿದ್ದು, ಮೂವರೂ ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಕಿರಣನ ಪತ್ನಿ ಸಂಗೀತಾಳ ವಿಡಿಯೋ ಒಂದು ಸಂಪತ್ ಬಳಿ ಇದ್ದು, ಇದನ್ನು ಇಟ್ಟುಕೊಂಡು ಆತ ಆಗಾಗ ಬ್ಲಾಕ್ ಮೈಲ್ ಮಾಡುತ್ತಿದ್ದನು ಎಂದು ಹೇಳಲಾಗಿದ್ದು, ಈ ಹಿಂದೆ ಸಂಗೀತಾ ಕೆಲವು ತಿಂಗಳುಗಳ ಕಾಲ ಸಂಪತ್’ನೊಂದಿಗೆ ಜೀವನ ನಡೆಸಿ, ನಂತರ ಪುನಃ ತನ್ನ ಮೊದಲ ಪತಿ ಕಿರಣದೊಂದಿಗೆ ಜೀವಿಸುತ್ತಿದ್ದಾಳೆ. ಆಕೆ ಪಡೆದುಕೊಂಡ 20 ಲಕ್ಷ ನೀಡದಿದ್ದಾಗ ಸಂಪತ್ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದರಿಂದ ಕುಪಿತರಾದ ಕಿರಣ್ ಹಾಗೂ ಸಂಗೀತಾ ಆಕೆಯ ಸಂಬಂಧಿ ಗಣಪತಿಯೊಂದಿಗೆ ಸೇರಿ ಸ್ಕೆಚ್ ಹಾಕಿ, ಆತನನ್ನು ಬರಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಗುತ್ತಿಗೆದಾರನಾಗಿದ್ದ ಸಂಪತ್ ನಾಯರ್ ಸ್ಥಿತಿವಂತನಾಗಿದ್ದು, ಕೆಲವೊಂದು ಕೆಟ್ಟ ಚಾಳಿಗೆ ಒಳಗಾಗಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಆಗಮಿಸಿದ್ದ ಸಂದರ್ಭ ಈತ ಅವರ ಮೇಲೆ ಮೊಟ್ಟೆ ಎಸೆದ ಆರೋಪವನ್ನೂ ಎದುರಿಸುತ್ತಿದ್ದ.