ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ದಾವಣಗೆರೆಯಲ್ಲಿ ಕಂಟ್ರಾಕ್ಟರ್ (Contractor) ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ, ಬಿಲ್ ಹಣ (bill payment) ಕೊಡದೆ ಸತಾಯಿಸುತ್ತಿದ್ದ ಕೆಆರ್ಐಡಿಎಲ್ (KRIDL) ಅಧಿಕಾರಿಗಳ ಕಿರುಕುಳವನ್ನೂ ಬಯಲಿಗೆಳೆಯುವ ಡೆತ್ ನೋಟ್ (Death note) ಬರೆದಿಟ್ಟು ಪ್ರಾಣ ಬಿಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರಿನ ಕಂಟ್ರಾಕ್ಟರ್ ಪಿ.ಎಸ್ ಗೌಡರ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ನೋಟ್ ಬರೆದಿಟ್ಟಿದ್ದಾರೆ. ಡೆತ್ನೋಟ್ನಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ನಿಂದ ತಮಗೆ ಬಾಕಿ ಬಿಲ್ ಪಾವತಿ ಮಾಡದೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಗೌಡರ್ ಸಂತೇಬೆನ್ನೂರಿನ ತಮ್ಮ ಮನೆಯಲ್ಲಿ ಮೇ 26ರಂದು ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೇಬೆನ್ನೂರಿನ ಕೃಷಿ ಇಲಾಖೆ ಆವರಣದಲ್ಲಿ ಕೆಲಸ ಮಾಡಿದ್ದ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡದೇ ಕೆಆರ್ಡಿಎಲ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. 2023- 24ರ ಸಾಲಿನಲ್ಲಿ ಕೆಲಸ ಮಾಡಿದ್ದು, ಬಿಲ್ ಪಾವತಿಸದೇ ತೊಂದರೆ ನೀಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಡೆತ್ ನೋಟ್ನಲ್ಲಿ ಕೆಆರ್ಡಿಎಲ್ ಅಧಿಕಾರಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗೌಡರ್, ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರಲ್ಲದೆ, ಕೆಆರ್ಐಡಿಎಲ್ ಸಂಸ್ಥೆಯಿಂದ ದೊಡ್ಡ ಮೊತ್ತದ ಪರಿಹಾರ ನೀಡುವಂತೆ ಆಗ್ರಹಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಅವರ ಇಬ್ಬರು ಸಹೋದರರ ಮೇಲೂ ಹಣಕಾಸಿನ ವಿಚಾರದಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ತನ್ನ ಸಹೋದರ ಶ್ರೀನಿವಾಸ್, ತನ್ನ ಮೇಲೆ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದೂ ದೂರಿದ್ದಾರೆ.
ತನಿಖೆಗೆ ಪ್ರಿಯಾಂಕ್ ಖರ್ಗೆ ಆದೇಶ
ಕಂಟ್ರಾಕ್ಟರ್ ಆತ್ಮಹತ್ಯೆ (Contractor Self Harming) ಪ್ರಕರಣ ಕುರಿತು ಇಲಾಖಾ ತನಿಖೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Rural Development Minister Priyank Kharge) ಆದೇಶಿಸಿದ್ದಾರೆ.
ಕ್ರೆಡಿಲ್ (KRIDL) ಗುತ್ತಿಗೆದಾರ ಪಿ.ಎಸ್ ಗೌಡರ್ ಎಂಬವರ ಆತ್ಮಹತ್ಯೆ ಪ್ರಕರಣ ಇದೀಗ ಸುದ್ದಿ ಮಾಡುತ್ತಿದೆ. ಕೆಆರ್ಐಡಿಎಲ್ ಅಧಿಕಾರಿಗಳು ಬಿಲ್ ಪಾವತಿ ಮಾಡದೆ ಕಿರುಕುಳ ನೀಡುತ್ತಿದ್ದುದನ್ನು ಕಂಟ್ರಾಕ್ಟರ್ ಡೆತ್ ನೋಟ್ ಬಯಲಿಗೆಳೆದಿತ್ತು. ಇದೀಗ ಈ ಬಗ್ಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ ತನಿಖೆ ನಡೆಸಿ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಸಿಎಸ್ಗೆ ಸಚಿವರು ಸೂಚನೆ ನೀಡಿದ್ದಾರೆ.