ಅರುಣ್ ಕುಮಾರ್ ಪುತ್ತಿಲ ಜತೆ ಮಾತುಕತೆ: ಸ್ಪಷ್ಟನೆ ಕೊಟ್ಟ ನಳಿನ್ ಕುಮಾರ್ ಕಟೀಲು

ಹೊಸದಿಗಂತ ವರದಿ ಪುತ್ತೂರು:

ಬಿಜೆಪಿ ಯಾವುದೇ ವೈಯಕ್ತಿಕ ವಿಚಾರಗಳನ್ನು ಇಲ್ಲಿ ಮಾತನಾಡಲು ಬಯಸುವುದಿಲ್ಲ. ಅರುಣ್ ಕುಮಾರ್ ಪುತ್ತಿಲರ ವಿಚಾರದ ಕುರಿತು ರಾಷ್ಟ್ರೀಯ ನಾಯಕರ ಜತೆ ಚರ್ಚೆಗಳಾಗಿವೆ. ಈ ಬಗ್ಗೆ ಸ್ಪಷ್ಟವಾಗಿದೆ. ಚರ್ಚೆಯ ತೀರ್ಮಾನಗಳನ್ನು ರಾಷ್ಟ್ರೀಯ ನಾಯಕರೇ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ತನ್ನನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಂದರ್ಭ, ಅರುಣ್ ಕುಮಾರ್ ಪುತ್ತಿಲರ ಜತೆ ಮಾತುಕತೆ ನಡೆಸುವ ಪ್ರಯತ್ನ ಮಾಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅರುಣ್ ಕುಮಾರ್ ಪುತ್ತಿಲರ ವಿಚಾರದ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳುವರು ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಗೊಂದಲಗಳಾಗಿತ್ತಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ, ಬಿಜೆಪಿಯಲ್ಲಿ ಯಾವುದೇ ಗೊಂದಲಗಳಾಗಲಿಲ್ಲ. ಪಕ್ಷದ ಎಲ್ಲಾ ನಾಯಕರು ಒಟ್ಟಾಗಿಯೇ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ ಕಾರಣದಿಂದ ಫಲಿತಾಂಶದಲ್ಲಿ ವ್ಯತ್ಯಾಸಗಳಾಗಿವೆ. ಅವರು ಬಿಜೆಪಿಯ ಹೆಸರಿನಲ್ಲಿ ಸ್ಪರ್ಧಿಸಲಿಲ್ಲ. ಪಕ್ಷದಲ್ಲಿ ಯಾರ್ಯಾರು ಇರಬೇಕು, ಯಾರ್ಯಾರು ಬರಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಿ ಪಕ್ಷದ ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸಲಾಗುವುದು. ಒಂದಂತೂ ಸ್ಪಷ್ಟ. ಬಿಜೆಪಿ ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ಪಕ್ಷವಾಗಿ ಸ್ಪರ್ಧಿಗಳನ್ನು ಕಣಕ್ಕಿಳಿಸುವುದು ಖಚಿತ. ಇದು ಪ್ರಜಾಪ್ರಭುತ್ವ ದೇಶ. ಇದು ಅವರವರ ವಿವೇಚನೆಗೆ ಬಿಟ್ಟದ್ದು ಎಂದು ಅವರು ತಿಳಿಸಿದರು.

ವಿಧಾನಸಭಾ ವಿಪಕ್ಷ ನಾಯಕನ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಸೂಕ್ತ ವಾತಾವರಣವನ್ನು ಪರಿಗಣಿಸಿ ಪಕ್ಷದ ರಾಷ್ಟ್ರೀಯ ನಾಯಕರು ಸಮರ್ಥ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿಯಲ್ಲಿ ಸಮರ್ಥರಾದ 66 ಮಂದಿ ಶಾಸಕರಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಪಕ್ಷದ ಮುಂದಿಲ್ಲ. ಲೋಕಸಭಾ ಚುನಾವಣೆಯ ತಯಾರಿ ಮಾಡಿದ್ದೇವೆಯೇ ಹೊರತು ಬಾಕಿ ಉಳಿದ ಹೊಂದಾಣಿಕೆಗಳ ಕುರಿತು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜನವರಿ, ಫೆಬ್ರವರಿ ತಿಂಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಗೋಪಾಲಕೃಷ್ಣ ಹೇರಳೆ, ಜೀವಂಧರ ಜೈನ್ ಮತ್ತಿತರರು ಸಂಸದರ ಜತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!