ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಕಲಬುರಗಿಯ ಆಳಂದ ತಾಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (28) ಎಂಬಾತ ಮರಣದಂಡನೆಗೆ ಒಳಗಾದ ಅಪರಾಧಿ.
2023ರ ಜುಲೈ 15ರಂದು ಪುಸ್ತಕ ತರಲು ಆಳಂದ ತಾಲೂಕಿನ ಗ್ರಾಮವೊಂದರಿಂದ ಮತ್ತೊಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಕೃಷಿ ಕೆಲಸ ಮಾಡುತ್ತಿದ್ದ ಅಪರಾಧಿ ಗುಂಡೇರಾವ ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಬಾಯಿ ಒತ್ತಿ ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಉಸಿರುಗಟ್ಟಿಸಿ ಕೊಂದು ಪಕ್ಕದ ಹೊಲದ ಬಾವಿಯಲ್ಲಿ ಶವವನ್ನು ಎತ್ತಿ ಹಾಕಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಭಾಸು ಚವ್ಹಾಣ ನೇತೃತ್ವದಲ್ಲಿ ನಿಂಬರ್ಗಾ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ.