ಮಲೆನಾಡು ಶೈಲಿಯ ಅಕ್ಕಿ ರೊಟ್ಟಿ ಕರ್ನಾಟಕದ ಅಚ್ಚುಮೆಚ್ಚಿನ ತಿನಿಸು. ಇದು ಮಲೆನಾಡಿನ ಮನೆಮಂದಿಯ ಮನಸ್ಸಿಗೆ ಹತ್ತಿರವಾದ ಬ್ರೇಕ್ ಫಾಸ್ಟ್. ಇದು ಸಾಂಪ್ರದಾಯಿಕವಾಗಿ ತಾಜಾ ತರಕಾರಿಗಳು, ಹಸಿ ಮೆಣಸು ಮತ್ತು ಹಸಿರು ಸೊಪ್ಪುಗಳಿಂದ ತಯಾರಿಸಲಾಗುತ್ತೆ. ಇವತ್ತು ಅಕ್ಕಿ ರೊಟ್ಟಿ ಮಾಡೋದು ಹೇಗೆ ಅಂತ ನೋಡೋಣ…..
ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು – 2 ಕಪ್
ನೀರು – 2 ಕಪ್
ಹಸಿ ಮೆಣಸು – 3-4 (ಸಣ್ಣಗೆ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ಮೆಂತ್ಯ ಸೊಪ್ಪು – ½ ಕಪ್ (ಸಣ್ಣಗೆ ಕತ್ತರಿಸಿ)
ತುರಿದ ತೆಂಗಿನಕಾಯಿ – ½ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – 1 ಟೀಚಮಚ
ಸಣ್ಣಗೆ ತುರಿದ ಕ್ಯಾರಟ್ – ½ ಕಪ್ (ಐಚಿಕ)
ಸಣ್ಣಗೆ ತುರಿದ ಕೊಬ್ಬರಿ – 2 ಟೀಚಮಚ
ಎಣ್ಣೆ ಅಥವಾ ತುಪ್ಪ – ರೊಟ್ಟಿ ಬೇಯಿಸಲು
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ. ನೀರು ಕುದಿಯುತ್ತಿದ್ದಂತೆ, ಅದರಲ್ಲಿ ಅಕ್ಕಿಹಿಟ್ಟು ಸೇರಿಸಿ, ಕಡಿಮೆ ಉರಿಯ ಮೇಲೆ ಹಿಟ್ಟು ಉಂಡೆಯಾಗಿ ಬರುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.
ಈ ಹಿಟ್ಟನ್ನು ಒಂದು ಪ್ಲೇಟಿಗೆ ತೆಗೆದುಕೊಂಡು, ಸ್ವಲ್ಪ ತಣ್ಣಗಾದ ಮೇಲೆ ಚೆನ್ನಾಗಿ ನಾದಿ, ಅದಕ್ಕೆ ಕತ್ತರಿಸಿದ ಹಸಿ ಮೆಣಸು, ಹಸಿರು ಸೊಪ್ಪು, ತುರಿದ ತೆಂಗಿನಕಾಯಿ, ಜೀರಿಗೆ, ಕ್ಯಾರಟ್ ಸೇರಿಸಿ ಚೆನ್ನಾಗಿ ಬೆರೆಸಿ.
ಈಗ ಬಾಳೆ ಎಲೆ, ಅಥವಾ ಬಟರ್ ಪೇಪರ್ ಮೇಲೆ ತೆಳುವಾಗಿ ಹಿಟ್ಟನ್ನು ಹಚ್ಚಿ ರೌಂಡ್ ಶೇಪ್ ಕೊಡಿ.
ಬಿಸಿ ಕಾವಲಿಗೆ ತುಪ್ಪ ಅಥವಾ ಎಣ್ಣೆ ಹಾಕಿ, ಈ ರೊಟ್ಟಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡು ಬದಿಯೂ ಚೆನ್ನಾಗಿ ಬೇಯಿಸಿದರೆ ಅಕ್ಕಿ ರೊಟ್ಟಿ ರೆಡಿ. ಬಿಸಿ ಬಿಸಿ ಅಕ್ಕಿ ರೊಟ್ಟಿಯನ್ನು ಬೆಣ್ಣೆ ಅಥವಾ ಕಾಯಿ ಚಟ್ನಿ ಜೊತೆ ಸವಿಯಿರಿ.