April 9, 2026
Thursday, April 9, 2026
spot_img

ಸಿಲಿಕಾನ್ ಸಿಟಿಯಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ: ಅಕ್ರಮ ದಾಸ್ತಾನುಕೋರರ ಮೇಲೆ ಖಾಕಿ ಹದ್ದಿನ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ನೇರವಾಗಿ ಬೆಂಗಳೂರಿನ ಅಡುಗೆಮನೆಗಳಿಗೆ ತಟ್ಟಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಗರದಲ್ಲಿ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕಳ್ಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಗೆ ಇಳಿದಿದ್ದಾರೆ.

ಅಕ್ರಮ ದಾಸ್ತಾನು ಮತ್ತು ಸಾಗಾಟದ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಪೊಲೀಸರು ಈಗಾಗಲೇ ನಗರದ ನಾಲ್ಕು ಪ್ರತ್ಯೇಕ ಕಡೆಗಳಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಪೀಣ್ಯ, ಆರ್‌ಎಂಸಿ ಯಾರ್ಡ್, ಕೆಂಗೇರಿ ಮತ್ತು ಚಿಕ್ಕಜಾಲ ಪೊಲೀಸ್ ಠಾಣೆಗಳಲ್ಲಿ ಸಾಗಾಟಗಾರರ ವಿರುದ್ಧ ದೂರು ದಾಖಲಾಗಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಡುಗೆ ಅನಿಲದ ಕೊರತೆಯಿಂದಾಗಿ ನಗರದ ಹೋಟೆಲ್ ಉದ್ಯಮ ಅಕ್ಷರಶಃ ಕಂಗೆಟ್ಟಿದೆ. ಸಿಲಿಂಡರ್ ಸಿಗದೆ ಹಲವು ಸಣ್ಣಪುಟ್ಟ ಹೋಟೆಲ್‌ಗಳು ಈಗಾಗಲೇ ಬಾಗಿಲು ಹಾಕಿವೆ. ಕಾರ್ಯನಿರ್ವಹಿಸುತ್ತಿರುವ ಕೆಲವು ಹೋಟೆಲ್‌ಗಳು ಗ್ಯಾಸ್ ಉಳಿತಾಯಕ್ಕಾಗಿ ತಮ್ಮ ತಿಂಡಿ-ಊಟದ ಮೆನುವಿನಲ್ಲಿ ಕಡಿತಗೊಳಿಸಿವೆ.

ಕೇವಲ ಉದ್ಯಮಗಳಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಸಿಲಿಂಡರ್ ಪಡೆಯುವುದು ಹರಸಾಹಸವಾಗಿ ಪರಿಣಮಿಸಿದೆ. ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರು ಮುಂಜಾನೆಯಿಂದಲೇ ಕ್ಯೂ ನಿಲ್ಲುವಂತಾಗಿದ್ದು, ಬುಕಿಂಗ್ ಮಾಡಿದರೂ ಸಿಲಿಂಡರ್ ಕೈ ಸೇರಲು ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !