ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಾಂತ್ಯದಲ್ಲಿ ಪ್ರಭಂಜನದಂತೆ ಗಳಿಕೆ ಮಾಡಿ ನಿರ್ಮಾಪಕರಿಗೆ ಸಂಭ್ರಮ ತಂದಿದ್ದ ರಜನಿಕಾಂತ್ ನಟನೆಯ ‘ಕೂಲಿ’ ಮತ್ತು ಹೃತಿಕ್ ರೋಷನ್–ಜೂನಿಯರ್ ಎನ್ಟಿಆರ್ ಅಭಿನಯದ ‘ವಾರ್ 2’ ಸಿನಿಮಾಗಳು ವಾರದ ಮೊದಲ ದಿನಕ್ಕೆ ಕಾಲಿಟ್ಟ ತಕ್ಷಣ ಬಾಕ್ಸ್ ಆಫೀಸ್‌ನಲ್ಲಿ ಕುಸಿತ ಕಂಡಿವೆ. ಸೋಮವಾರದ ಕಲೆಕ್ಷನ್‌ನಲ್ಲಿ ಈ ಎರಡೂ ಚಿತ್ರಗಳು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದ್ದು, ಇದೀಗ ವೀಕೆಂಡ್ ಹಾಗೂ ಗಣೇಶ ಚತುರ್ಥಿ ರಜೆಯಿಂದ ಪುನಃ ಚೇತರಿಕೆ ಕಾಣುವ ನಿರೀಕ್ಷೆ ವ್ಯಕ್ತವಾಗಿದೆ.
‘ಕೂಲಿ’ ಸಿನಿಮಾ ನಾಲ್ಕು ದಿನಗಳಲ್ಲಿ 194 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಸೋಮವಾರದ ಕಲೆಕ್ಷನ್ 12 ಕೋಟಿ ರೂಪಾಯಿಗೆ ಇಳಿದಿದೆ. ಭಾನುವಾರ ಈ ಸಿನಿಮಾ 35 ಕೋಟಿ ರೂಪಾಯಿ ಗಳಿಕೆ ಮಾಡಿದ್ದನ್ನು ಪರಿಗಣಿಸಿದರೆ ಕುಸಿತವು ಗಮನಾರ್ಹವಾಗಿದೆ. ಪ್ರಸ್ತುತ ‘ಕೂಲಿ’ಯ ಒಟ್ಟು ಕಲೆಕ್ಷನ್ 206.5 ಕೋಟಿಯಾಗಿದೆ. ಮುಂದಿನ ದಿನಗಳಲ್ಲಿ (ಶುಕ್ರವಾರದವರೆಗೆ) ಇನ್ನಷ್ಟು ಇಳಿಕೆ ಕಂಡು ಒಂದಂಕಿಗೆ ತಲುಪುವ ಸಾಧ್ಯತೆ ಇದೆ. ಆದರೆ ವಾರಾಂತ್ಯದಲ್ಲಿ ಮತ್ತೆ ವೇಗ ಪಡೆಯುವ ನಿರೀಕ್ಷೆ ಇದೆ. ಈ ಗತಿಯಲ್ಲೇ ಮುಂದುವರಿದರೆ ಭಾರತದಲ್ಲಿ 300 ಕೋಟಿ, ವಿಶ್ವ ಮಟ್ಟದಲ್ಲಿ 600 ಕೋಟಿ ರೂಪಾಯಿಯ ಗಡಿ ಮುಟ್ಟಬಹುದೇ ಎಂಬ ಕುತೂಹಲ ಮೂಡಿದೆ.
ಇದೇ ವೇಳೆ ‘ವಾರ್ 2’ ಸಿನಿಮಾ ಸಹ ಸೋಮವಾರದಲ್ಲಿ ಭಾರಿ ಕುಸಿತ ಅನುಭವಿಸಿದೆ. ಭಾನುವಾರ 32 ಕೋಟಿ ಗಳಿಕೆ ಮಾಡಿದ ಈ ಸಿನಿಮಾ ಸೋಮವಾರಕ್ಕೆ ಕೇವಲ 8.5 ಕೋಟಿ ರೂಪಾಯಿಗೆ ಸೀಮಿತವಾಯಿತು. ಒಟ್ಟು ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಈಗಾಗಲೇ 183.25 ಕೋಟಿಯಾಗಿದೆ.
‘ಕೂಲಿ’ ಮತ್ತು ‘ವಾರ್ 2’ ಎರಡೂ ಚಿತ್ರಗಳು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿವೆ. ವಾರದ ದಿನಗಳಲ್ಲಿ ಕಲೆಕ್ಷನ್ ಕುಸಿತ ಕಂಡಿದ್ದರೂ ಹಬ್ಬದ ರಜೆಗಳು ಹಾಗೂ ಮುಂದಿನ ವಾರಾಂತ್ಯದ ಹೊತ್ತಿಗೆ ಈ ಸಿನಿಮಾಗಳು ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರೆಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗೆ ಸಾಗುತ್ತದೆ ಎಂಬುದೇ ಸಿನಿಮಾ ಪ್ರೇಮಿಗಳ ಕುತೂಹಲವಾಗಿದೆ.