ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕು: ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ, ಶನಿವಾರಸಂತೆ:

ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ಸಾಲ ವಿತರಣೆ ಮಾಡುವಂತಾಗಬೇಕು ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ನೀಡಿರುವ ಸಾಲವನ್ನು ರೈತರು ಸಕಾಲದಲ್ಲಿ ಮರು ಪಾವತಿ ಮಾಡುವಂತೆ ರೈತರಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿ ಸದಸ್ಯರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕೆಂದರು. ಸಹಕಾರಿ ಸಂಘಗಳ ವತಿಯಿಂದ ರಾಜ್ಯ ಸರಕಾರದ ವಿವಿಧ ಸಹಕಾರಿ ಯೋಜನೆಗಳ ಕುರಿತಾಗಿ ರೈತರಿಗೆ ಸಮಗ್ರ ಮಾಹಿತಿ ನೀಡಬೇಕು. ರಾಜ್ಯಾದ್ಯಂತ ಸಾವಿರಾರು ಗಟ್ಟಲೆ ಇರುವ ಸಹಕಾರಿ ಸಂಘಗಳು ಲಾಭಾಂಶವನ್ನು ಕಂಡಿದ್ದು, ಕೇವಲ ಬೆರಳೆಣಿಕೆಯ ಸಹಕಾರಿ ಸಂಘಗಳು ನಷ್ಟದ ಹಾದಿ ತುಳಿದಿವೆ. ಈ ನಿಟ್ಟಿನಲ್ಲಿ ಸಹಕಾರಿ ಅಧಿಕಾರಿಗಳು ಯಾವುದೇ ಭ್ರಷ್ಟಚಾರಕ್ಕೆ ಎಡೆ ಮಾಡಿಕೊಡದೆ ಪ್ರಾಮಾಣಿಕವಾಗಿ, ನಿಷ್ಟಕ್ಷಪಾತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಹಕಾರಿ ಸಂಘಗಳು ಯಶಸ್ಸಿನತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ರಾಜಕೀಯ ರಹಿತವಾಗಿರಬೇಕು: ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯು ರಾಜಕೀಯೇತರವಾಗಿ ಕಾರ್ಯನಿರ್ವಹಿಸಬೇಕು. ಕೊಡಗು ಜಿಲ್ಲೆ ಸಹಕಾರ ಸಂಸ್ಥೆ ಪ್ರಾರಂಭಿಸಿದ ಪ್ರಥಮ ಜಿಲ್ಲೆಯಾಗಿದ್ದು, ಇದೀಗ ಕೊಡ್ಲಿಪೇಟೆಯ ಕೃಷಿ ಪತ್ತಿನ ಸಂಘ ನೂರನೇ ವರ್ಷಾಚರಣೆ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಬಡ ರೈತರ ಅನುಕೂಲಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ರೀತಿಯ ಸಾಲ ಸೌಲಭ್ಯವನ್ನು ಮತ್ತು ಸರಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿಯೊಬ್ಬ ಸಹಕಾರಿಗಳೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.
ಮಡಿಕೇರಿ ಶಾಸಕ ಅಪ್ಪಚ್ಚುರಂಜನ್, ಜಿಲ್ಲಾ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಡಿ.ತಮ್ಮಯ್ಯ, ಉಪಾಧ್ಯಕ್ಷ ಸುಬ್ರಮಣ್ಯ ಆಚಾರ್, ಸಹಕಾರ ಬ್ಯಾಂಕ್ ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಎಸ್.ಬಿ.ಭರತ್‍ಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ, ಸಹಾಯಕ ನಿಬಂಧಕ ಎಚ್.ಡಿ.ರವಿಕುಮಾರ್, ಸಂಘದ ಕಟ್ಟಡ ದಾನಿ ಸುರೇಶ್, ಪ್ರಮುಖರಾದ ಕಾಳಪ್ಪ, ಅಪ್ಪಸ್ವಾಮಿ, ರೇಣುಕಾ, ವಸಂತ್, ನಿರ್ಮಲಾ, ಭಾನುಮತಿ ಮುಂತಾದವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!