ಹೊಸದಿಗಂತ ಡಿಜಿಟಲ್ ಡೆಸ್ಕ್:
2028 ರಲ್ಲಿ ಭಾರತದಲ್ಲಿ (India) COP33 ಶೃಂಗಸಭೆಯನ್ನು ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಸ್ತಾಪಿಸಿದ್ದಾರೆ.
ದುಬೈನಲ್ಲಿ (Dubai) ನಡೆಯುತ್ತಿರುವ ಸಿಒಪಿ-28 ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ, ಭಾರತದ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇ.17 ರಷ್ಟಿದೆ. ಆದರೆ ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಭಾರತದ ಪಾತ್ರ ಕೇವಲ 4% ನಷ್ಟಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆಯು ತುಂಬಾ ಕಡಿಮೆ ಇರುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹೊರಸೂಸುವಿಕೆ ತುಂಬಾ ಕಡಿಮೆಯಾಗಿದೆ. ಜಾಗತಿಕ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಇಂದು ಕರೆ ನೀಡಿದ್ದಾರೆ.
ಈ ವೇಳೆ, ಭಾರತದ ಪರಿಸರ ಬದ್ಧತೆಗಳನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, 2030 ರ ವೇಳೆಗೆ ಭಾರತವು ತನ್ನ GDP ಯ ಹೊರಸೂಸುವಿಕೆಯ ತೀವ್ರತೆಯನ್ನು 45 ಪ್ರತಿಶತದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ನಾವು ಪಳೆಯುಳಿಕೆಯೇತರ ಇಂಧನಗಳ ಪಾಲನ್ನು 50 ಪ್ರತಿಶತಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಹೆಚ್ಚುವರಿಯಾಗಿ ಉನ್ನತ ಮಟ್ಟದ ವಿಭಾಗದಲ್ಲಿ ತಮ್ಮ ಭಾಷಣದಲ್ಲಿ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್‌ನ ಕಲ್ಪನೆಯನ್ನು ಪರಿಚಯಿಸಿದ್ದು, ಪರಿಸರ ಉಸ್ತುವಾರಿ ಕಡೆಗೆ ಮತ್ತೊಂದು ಪೂರ್ವಭಾವಿ ಹೆಜ್ಜೆಯನ್ನು ಪ್ರಸ್ತಾಪಿಸಿದರು.
ಒಟ್ಟಾರೆ ಪ್ರಧಾನಿ ದುಬೈನಲ್ಲಿ ಸುಮಾರು 21 ಗಂಟೆಗಳ ಕಾಲ ಕಳೆಯಲಿದ್ದು, ಮತ್ತು ಈ ವೇಳೆ 4 ಭಾಷಣ, 2 ಹವಾಮಾನ ಘಟನೆಗಳ ವಿಶೇಷ ಉಪಕ್ರಮ, 7 ದ್ವಿಪಕ್ಷೀಯ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ವಿಶ್ವ ನಾಯಕರೊಂದಿಗೆ ಅನೌಪಚಾರಿಕ ಸಭೆಗಳನ್ನು ಮಾಡುತ್ತಾರೆ ಎಂದೂ ತಿಳಿದುಬಂದಿದೆ.
COP-28 ರ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ದುಬೈಗೆ ತೆರಳಿದರು. ಪ್ರಧಾನಿ ಮೋದಿ ದುಬೈನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ಶೃಂಗಸಭೆಯ ವಿವರಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ದುಬೈಗೆ ಹೊರಡುತ್ತಿದ್ದೇನೆ, ಅಲ್ಲಿ ನಾನು COP-28 ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ. ಈ ವೇದಿಕೆಯು ಹವಾಮಾನ ಬದಲಾವಣೆಯ ವಿರುದ್ಧ ಗೆಲುವು ಸಾಧಿಸಲು ಮತ್ತು ಮತ್ತಷ್ಟು ಸುಸ್ಥಿರ ಅಭಿವೃದ್ಧಿಯ ಪ್ರಯತ್ನಗಳನ್ನು ಬಲಪಡಿಸುವ ಪ್ರಮುಖ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ನಾನು ಶೃಂಗಸಭೆಯಲ್ಲಿ ವಿವಿಧ ವಿಶ್ವ ನಾಯಕರೊಂದಿಗೆ ಸಂವಾದ ನಡೆಸಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.