ಹೊಸದಿಗಂತ ವರದಿ, ಮಂಡ್ಯ:
ಹಿಜಾಬ್-ಕೇಸರಿ ವಿಚಾರ ಈಗ ಜೈನ ಧರ್ಮಕ್ಕೂ ವ್ಯಾಪಿಸಿದ್ದು, ಮೈಸೂರಿನ ನ್ಯೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಯೂಬ್‌ಖಾನ್ ಎಂಬುವರ ವಿರುದ್ಧ ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜದವರು ದೂರು ದಾಖಲಿಸಿದ್ದಾರೆ.
ಧರ್ಮನಿಂದನೆ ಹಾಗೂ ಜಾತಿ ನಿಂದನೆ ಅಪರಾಧದಡಿ ಸೂಕ್ತ ಕಾನೂನು ಕ್ರಮಕ್ಕಾಗಿ ಒತ್ತಾಯಿಸಿ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ಚಾನಲ್‌ವೊಂದರಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಟೀಕಿಸುವ ಭರದಲ್ಲಿ ಆಯೂಬ್ ಖಾನ್ ಜೈನ ಧರ್ಮಕ್ಕೆ ಸಂಬಂಧಪಟ್ಟಂತೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬೆಟ್ಟದ ಮೇಲೆ ಗೊಮ್ಮಟೇಶ್ವರನನ್ನು ನಿಲ್ಲಿಸಿದ್ದೀರಾ, ನೀವು ಮೊದಲು ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿ, ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರುವ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಹಲವು ಬಾರಿ ಹೇಳುವ ಮೂಲಕ ಜೈನ ಧರ್ಮಿಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಈ ಹೇಳಿಕೆಯಿಂದ ಜೈನ ಧರ್ಮದ ಅನುಯಾಯಿಗಳಾದ ನಮಗೆ ನೋವುಂಟು ಮಾಡಿದೆ. ಈ ಹೇಳಿಕೆಯನ್ನು ಮಂಡ್ಯ ಜೈನ ಸಮಾಜ ಕಠಿಣವಾಗಿ ಖಂಡಿಸುತ್ತದೆ. ಇಂತಹ ಧರ್ಮನಿಂದನೆ ಹೇಳಿಕೆ ನೀಡಿರುವ ಆಯೂಬ್ ಖಾನ್ ವಿರುದ್ಧ ಎ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಎಂ.ಎನ್.ಶಾಂತಿಪ್ರಸಾದ್, ರವಿ, ನಾಗರಾಜು, ಜಿತೇಂದ್ರ, ನಾಗೇಶ್, ವೀರೇಂದ್ರ ಜೈನ್, ವಿಜಯ್‌ಕುಮಾರ್, ಪುಟ್ಟರ್‌ಮಲ್ಲು ಜೈನ್ ಇತರರಿದ್ದರು.