ಕೊರೋನಾ ಲಸಿಕೆ ಪಡೆಯುವುದು ಜನರ ಆಯ್ಕೆಗೆ ಬಿಟ್ಟಿದ್ದು; ಒತ್ತಡವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾಂಕ್ರಾಮಿಕ ರೋಗ ಕೊರೋನಾಗೆ ನೀಡಲಾಗುವ ಲಸಿಕೆಯನ್ನು ಜನರು ಪಡೆಯುವುದು, ಬಿಡುವುದು ಅವರಿಗೆ ಬಿಟ್ಟ ಆಯ್ಕೆಯಾಗಿದೆ. ಇದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸ್ಪಷ್ಟಪಡಿಸಿದೆ.

ಕೋವಿಡ್​​ ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಿಂದ ತಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಇಬ್ಬರು ಪೋಷಕರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಪೀಠ, ಈ ಬಗ್ಗೆ ಕೇಂದ್ರದ ಅಭಿಪ್ರಾಯ ಕೇಳಿತ್ತು.

ಇದಕ್ಕೆ ಅಫಿದವಿತ್ ​ ಸಲ್ಲಿಸಿದ ಕೇಂದ್ರ ಸರ್ಕಾರ, ಲಸಿಕೆಯನ್ನು ಸಾರ್ವಜನಿಕ ಉದ್ದೇಶದಿಂದ ನೀಡಲಾಗುತ್ತಿದೆ. ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಲಸಿಕಾಕರಣ ಅಭಿಯಾನ ನಡೆಸಲಾಗಿದೆ. ಜನರಿಗೆ ಯಾವುದೇ ಒತ್ತಾಯಪೂರ್ವಕವಾಗಿ ಲಸಿಕೆಯನ್ನು ಹಾಕಲಾಗಿಲ್ಲ. ಈ ಬಗ್ಗೆ ತಿಳಿವಳಿಕೆ ಮಾತ್ರ ನೀಡಲಾಗಿದೆ. ಪಡೆಯುವ ಮತ್ತು ತಿರಸ್ಕರಿಸುವ ಆಯ್ಕೆ ಜನರಿಗಿದೆ. ಇದರ ಮೇಲೆ ಯಾವುದೇ ಕಾನೂನಿನ ಒತ್ತಡವಿಲ್ಲ ಎಂದು ಕೇಂದ್ರ ತಿಳಿಸಿದೆ.

ಲಸಿಕೆ ಪಡೆದ ಬಳಿಕ ಆಗುವ ಅಡ್ಡಪರಿಣಾಮಗಳಿಗೆ ಯಾವುದೇ ಪುರಾವೆಗಳಿಲ್ಲ. ಲಸಿಕೆಯ ಮೇಲೆ ಸಂಶೋಧಕರು ತೀವ್ರ ನಿಗಾ ವಹಿಸಿದ್ದಾರೆ. ಎಲ್ಲ ರೀತಿಯ ಪ್ರಯೋಗಗಳ ಬಳಿಕವೇ ಲಸಿಕೆಯನ್ನು ಜನರಿಗೆ ನೀಡಲು ಅನುಮತಿ ನೀಡಲಾಗಿದೆ. ಇದನ್ನು ಪಡೆದು ಹಾನಿಗೊಳಗಾದ ಪ್ರಕರಣಗಳು ದಾಖಲಾಗಿಲ್ಲ ಎಂದು ಅಫಿದವಿತ್ ​ನಲ್ಲಿ ಕೇಂದ್ರ ಹೇಳಿದೆ.

ಅರ್ಜಿದಾರರು ತಮ್ಮ ಮಕ್ಕಳ ಸಾವಿಗೆ ಲಸಿಕೆಯೇ ಕಾರಣ ಎಂಬುದನ್ನು ವೈದ್ಯಕೀಯವಾಗಿ ದೃಢಪಡಿಸಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!