ಹೊಸದಿಗಂತ ವರದಿ, ಮಂಗಳೂರು:
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಾಂಗ್ರೆಸ್ ಸರಕಾರದಿಂದ ಭ್ರಷ್ಟಾಚಾರದ ಅಂಗಡಿ ಓಪನ್ ಆಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಎಚ್.ಡಿ.ಕುಮಾರಸ್ವಾಮಿಯವರ ಆರೋಪ ಸರಿಯಾಗಿಯೇ ಇದೆ. ರಾಜ್ಯದ ಪ್ರತಿ ತಾಲೂಕು ಕಚೇರಿ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಅಧಿಕಾರಿಗಳಿಗೇ ಇಂತಿಷ್ಟು ಕೋಟಿ ನೀಡಬೇಕೆಂಬ ಟಾರ್ಗೆಟ್ ನೀಡಿರುವ ದೂರುಗಳು ಕೇಳಿಬರುತ್ತಿವೆ. ಈ ಸರಕಾರಕ್ಕೆ ರಾಜ್ಯದ ಅಭಿವೃದ್ಧಿಯ ಯೋಚನೆಯೇ ಇಲ್ಲ ಎಂದರು.
ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿರುವ ರಾಜ್ಯಸರಕಾರ ರಾಜ್ಯದ ಅಭಿವೃದ್ಧಿ ಮರೆತಿದೆ. ಗ್ಯಾರಂಟಿಗಳಿಂದ ರಾಜ್ಯ ಅಭಿವೃದ್ಧಿಯಾಗದು. ಸುಧೀರ್ಘ 60 ವರ್ಷಗಳಷ್ಟು ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನಿಂದ ಹಳ್ಳಿ ಹಳ್ಳಿಗಳಲ್ಲಿ ಶಾಲೆ, ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ರೈಲ್ವೆ ಇಲಾಖೆಯಲ್ಲೂ ಯಾವುದೇ ಅಭಿವೃದ್ಧಿ ಮಾಡಲಾಗಿಲ್ಲ. ಆದರೆ ಮೋದಿಯವರು ಪ್ರಧಾನಿಯಾದ ಮೇಲೆ ಎಲ್ಲವೂ ಬದಲಾಗಿದೆ. ಜನತೆ ಮೋದಿಯವರ ಮೇಲೆ ವಿಶ್ವಾಸವಿರಿಸಿದ್ದಾರೆ. ಅಬಿವೃದ್ಧಿ ಕಾರ್ಯಗಳು ವೇಗಪಡೆದಿವೆ ಎಂದು ನಳಿನ್ ಹೇಳಿದರು.