ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಮ್ಮಿನ ಸಿರಪ್ ಅಕ್ರಮ ಸಾಗಣೆ ಪ್ರಕರಣವು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟ ಸಂದೇಶ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿದವರು ಯಾವುದೇ ರಾಜಕೀಯ ರಕ್ಷಣೆ ಪಡೆಯಲಾರರು ಎಂದು ಎಚ್ಚರಿಸಿದರು.
ಈ ಪ್ರಕರಣದಲ್ಲಿ ಸಮಾಜವಾದಿ ಪಕ್ಷಕ್ಕೆ ಸಂಪರ್ಕ ಹೊಂದಿರುವವರ ಹೆಸರುಗಳು ಹೊರಬರುತ್ತಿರುವುದಾಗಿ ಯೋಗಿ ಆರೋಪಿಸಿದರು. ಕಾನೂನು ಉಲ್ಲಂಘಿಸಿದವರ ವಿರುದ್ಧ ಅಗತ್ಯವಿದ್ದರೆ ಬುಲ್ಡೋಜರ್ ಕಾರ್ಯಾಚರಣೆಗೂ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು. ಈಗಾಗಲೇ ಪ್ರಕರಣ ಸಂಬಂಧ 78 ಮಂದಿಯನ್ನು ಬಂಧಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ 134 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮ ಜಾಲದ ಆಳವಾದ ತನಿಖೆಗಾಗಿ ಡಿಜಿಪಿ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಸಿರಪ್ ಉತ್ಪಾದನೆ ನಡೆಯುವುದಿಲ್ಲ; ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ತಯಾರಾಗಿ ರಾಜ್ಯಕ್ಕೆ ಅಕ್ರಮವಾಗಿ ತರಲಾಗುತ್ತಿದೆ ಎಂದು ಅವರು ತಿಳಿಸಿದರು. ನಂತರ ನಕಲಿ ಬಿಲ್‌ಗಳ ಮೂಲಕ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬ ಆರೋಪವನ್ನು ಮುಂದಿಟ್ಟರು.
ಈ ಅಕ್ರಮದ ಹಿಂದೆ ಇರುವ ಎಲ್ಲರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

