ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್ಡೌನ್ ಶುರುವಾಗಿದೆ.
ಪೂರ್ವನಿಗಧಿಯಂತೆ ಎಲ್ಲವೂ ನಡೆದರೆ ಇಂದು ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3ರ ಉಪಗ್ರಹವನ್ನು ಹೊತ್ತ ಎಲ್ಎಂವಿ-3ರಾಕೆಟ್ ನಭದತ್ತ ಚಿಮ್ಮಲಿದೆ.
ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಮತ್ತು ರೋವರ್ನ್ನು ಇಳಿಸುವ ಈ ಕಾರ್ಯಾಚರಣೆ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಚಂದ್ರಯಾನ-೩ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆಯಾಗಲಿದೆ.
2019ರಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ನೌಕೆಯನ್ನು ಇಳಿಸುವ ಚಂದ್ರಯಾನ-2 ಕಾರ್ಯಾಚರಣೆ ಭಾಗಶಃ ಮಾತ್ರ ಯಶಸ್ವಿಯಾಗಿತ್ತು. ಚಂದ್ರನ ಪರಿಭ್ರಮಣ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ ಚಂದ್ರನ ನೆಲ ಇನ್ನೇನು ಮುಟ್ಟಬೇಕು ಎನ್ನುವಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು.
ಚಂದ್ರಯಾನ-2ರ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3ಯಶಸ್ಸಿಗೆ ಇಸ್ರೋ ಶ್ರಮಿಸಿದೆ. ಚಂದ್ರಯಾನ-3, ಚಂದ್ರಯಾನ-2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಚಂದ್ರನಲ್ಲಿ ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ತನ್ನ ಲ್ಯಾಂಡರ್ ಮತ್ತು ರೋವರ್ಗಳನ್ನು ಇಳಿಸಿದೆ. ಈ ಬಾರಿ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ನ್ನು ಇಳಿಸುವಲ್ಲಿ ಮತ್ತು ರೋವರ್ನ್ನು ಲ್ಯಾಂಡರ್ ಒಳಗಿಂದ ಹೊರಗೆ ಕಳಿಸುವಲ್ಲಿ ಭಾರತ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದ ನಂತರ ಲ್ಯಾಂಡರ್ ಹಾಗೂ ರೋವರ್ ನೌಕೆಗಳೆರಡೂ ಒಂದು ದಿನ ಮಾತ್ರ ಚಂದ್ರನಂಗಳದಲ್ಲಿ ಕಾರ್ಯ ನಿರ್ವಹಿಸಲಿವೆ, ಚಂದ್ರನಲ್ಲಿ ಒಂದು ದಿನ, ಭೂಮಿಯಲ್ಲಿ 14 ದಿನಗಳಿಗೆ ಸಮಯವಾಗಿದೆ. ಈ ಅವಧಿಯಲ್ಲಿ ಕಾರ್ಯಾಚರಣೆ ನಡೆಯಲಿದೆ. ಚಂದ್ರಯಾನ-3 ಉಡಾವಣೆಗೆ ವಿಶ್ವವೇ ಎದುರು ನೋಡುತ್ತಿದ್ದು, ಇನ್ನೇನು ಕೆಲವೇ ಸಮಯದಲ್ಲಿ ಉಡಾವಣೆಯಾಗಲಿದೆ.