ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣದ ಗಂಗೆ ಕಾವೇರಿಯ ತವರು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಬುಧವಾರ ಮಧ್ಯರಾತ್ರಿ 1.27ಕ್ಕೆ ಜರುಗಲಿರುವ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
ವರ್ಷಕ್ಕೊಮ್ಮೆ ತುಲಾ ಸಂಕ್ರಮಣದಂದು ಜರಗುವ ತೀರ್ಥೋದ್ಭವದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಭಕ್ತರೂ ತಂಡೋಪತಂಡವಾಗಿ ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಈಗಾಗಲೇ ನಿಗದಿಯಾಗಿರುವಂತೆ ಬುಧವಾರ ಮಧ್ಯರಾತ್ರಿ 1.27ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಕಾಣಿಸಿಕೊಳ್ಳಲಿದ್ದು, ಇದಕ್ಕೆ ಪೂರಕವಾಗಿ ಕ್ಷೇತ್ರದ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಮಂಗಳವಾರ ರಾತ್ರಿಯಿಂದಲೇ ಆರಂಭವಾಗಲಿದೆ.
ಮಂಗಳವಾರ ಸಂಜೆ 4 ಗಂಟೆಯ ಬಳಿಕ ಬ್ರಹ್ಮ ಕುಂಡಿಕೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಅಲ್ಲದೆ ಭಾಗಮಂಡಲದಿಂದ ತಲಕಾವೇರಿಗೆ ವಾಹನಗಳ ಪ್ರವೇಶವನ್ನೂ ನಿಷೇಧಿಸಲಾಗಿದೆ. ಆದರೆ ಭಕ್ತರ ಪ್ರಯಾಣಕ್ಕಾಗಿ ಉಚಿತ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಈ ಬಾರಿ ತೀರ್ಥ ಕೊಂಡೊಯ್ಯಲು ಪ್ಲಾಸ್ಟಿಕ್ ಬಿಂದಿಗೆ, ಬಾಟಲಿ ಡಬ್ಬಗಳನ್ನು ತರುವುದನ್ನು ನಿಷೇಧಿಸಲಾಗಿದೆ
ದೇವಸ್ಥಾನದ ಆವರಣದಲ್ಲಿ ಭಕ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಭದ್ರತೆಗಾಗಿ ಕೆಎಸ್ಆರ್ಪಿ ಮತ್ತು ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಕಳೆದೆರಡು ದಿನಗಳಿಂದ ತಲಕಾವೇರಿಯಲ್ಲಿ ಮಳೆಯಾಗುತ್ತಿದ್ದು, ಹಾಗಾಗಿ ತೀರ್ಥೋದ್ಭವದ ವೇಳೆ ಮಳೆ ಬಂದರೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಆದರೆ ಈ ಬಾರಿ ಮಧ್ಯರಾತ್ರಿ ತೀರ್ಥೋದ್ಭವವಾಗಲಿರುವುದರಿಂದ ಈ ಸಮಯದಲ್ಲಿ ಕೊಡಗಿನ ಭಕ್ತರ ಸಂಖ್ಯೆ ಕಡಿಮೆ ಇರಬಹುದೆಂದು ಅಂದಾಜಿಸಲಾಗಿದೆ.
ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ದರ್ಶನ ನೀಡುವ ಪವಿತ್ರ ಕ್ಷಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಜಿಲ್ಲೆಯ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.