ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿಯ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು, ನಾಗಸಾಧುಗಳು, ಪಂಡಿತರು ಸೇರಿದಂತೆ ಲಕ್ಷ ಲಕ್ಷ ಜನರು ಭಾಗಿಯಾಗಲಿದ್ದಾರೆ.
ಈಗಾಗಲೇ ಮಹಾಕುಂಭ ಕಾರ್ಯಕ್ರಮಕ್ಕೆ ಪ್ರಯಾಣಿಸಲು ಕೇಂದ್ರ ಸರ್ಕಾರ ಪ್ರಯಾಣಿಕರಿಗೆಂದು ರೈಲ್ವೆ ಸೇವೆಯನ್ನು ಜಾರಿಗೊಳಿಸಿದೆ.
ಇದೀಗ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಅಡ್ಡಿಪಡಿಸುವುದಾಗಿ ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ ನಾಯಕ, ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಹೊಸ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ವೀಡಿಯೊವೊಂದರಲ್ಲಿ ಶೇರ್ ಮಾಡಿರುವ ಗುರುಪತ್‌ವಂತ್ ಸಿಂಗ್ ಪನ್ನುನ್, ಹಿಂದುತ್ವ ಸಿದ್ಧಾಂತವನ್ನು ವಿರೋಧಿಸಲು ಮತ್ತು ಇನ್ನಿಲ್ಲದಂತೆ ಮಾಡಲು ‘ಪ್ರಯಾಗ್ ರಾಜ್ ಚಲೋ’ ಗೆ ಕರೆ ನೀಡಿದ್ದಾನೆ. ಲಕ್ನೋ ಮತ್ತು ಪ್ರಯಾಗರಾಜ್‌ನ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರಿ ಧ್ವಜಗಳನ್ನು ಹಾರಿಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದು, ವೀಡಿಯೋದ ಕೊನೆಯಲ್ಲಿ ‘ಮಹಾಕುಂಭ ಪ್ರಯಾಗರಾಜ್ 2025 ಯುದ್ಧಭೂಮಿಯಾಗಲಿದೆ’ ಎಂದು ಹೇಳಿದ್ದಾನೆ.
ಹತ್ತು ದಿನಗಳ ಅಂತರದಲ್ಲಿ ಮಹಾಕುಂಭ ಮೇಳಕ್ಕೆ ಪನ್ನುನ್‌ಗೆ ಹಾಕಿದ ಎರಡನೇ ಬೆದರಿಕೆ ಇದಾಗಿದ್ದು, ಹಿಂದಿನ ವೀಡಿಯೊದಲ್ಲಿ, ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮವಾಸ್ಯೆ (ಜನವರಿ 29), ಮತ್ತು ಬಸಂತ್ ಪಂಚಮಿ (ಫೆಬ್ರವರಿ 3) ಸೇರಿದಂತೆ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಸ್ನಾನದ ದಿನಾಂಕಗಳನ್ನು ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ. ಪನ್ನುನ್ ಹಿಂದಿನ ವೀಡಿಯೊವನ್ನು ಅಖಿಲ ಭಾರತೀಯ ಅಖಾಡ ಪರಿಷತ್ ತೀವ್ರವಾಗಿ ಖಂಡಿಸಿದೆ.
ಮಹಾಕುಂಭ ನಗರದಲ್ಲಿಂದು ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ, ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆಗಳಿಗೆ ಟಾಂಗ್ ನೀಡಿದ್ದು, ಆತನೊಬ್ಬ ಮೂರ್ಖ ಎಂದಿದ್ದಾರೆ. ಅಲ್ಲದೇ, ಪನ್ನುನ್ ಎಂಬ ವ್ಯಕ್ತಿ ನಮ್ಮ ಮಹಾಕುಂಭಕ್ಕೆ ಪ್ರವೇಶಿಸಲು ಧೈರ್ಯ ಮಾಡಿದರೆ, ಅವನನ್ನು ಹೊಡೆದು ಓಡಿಸಲಾಗುತ್ತದೆ. ಇಂತಹ ನೂರಾರು ಹುಚ್ಚರನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.