ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದ್ದು, ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ವಿಶ್ವಕಪ್ ಟೂರ್ನಿಯು ಭಾರತದ 10 ವಿವಿಧ ಸ್ಟೇಡಿಯಂನಲ್ಲಿ ಜರುಗಲಿದೆ.
ಇದೀಗ ಟೀಂ ಇಂಡಿಯಾಗೆ ಜೆರ್ಸಿ ಪ್ರಾಯೋಜಕತ್ವ ನೀಡುವ ಆ್ಯಡಿಡಾಸ್ ಜೆರ್ಸಿ ಅನಾವರಣ ಮಾಡಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಸರಿಯಾಗಿ 15 ದಿನಗಳು ಬಾಕಿ ಇರುವಾಗಲೇ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಜೆರ್ಸಿ ಅನಾವರಣವಾಗಿದ್ದು, ನೂತನ ಜೆರ್ಸಿಯಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಆ್ಯಡಿಡಾಸ್ ಈ ಕುರಿತಂತೆ ಒಂದು ವಿಡಿಯೋ ಹಂಚಿಕೊಂಡಿದ್ದು,ರ್ಯಾಪರ್ ರಫ್ತಾರ್ ಅವರು ಹಾಡಿರುವ ‘3 ಕ ಡ್ರೀಮ್'(ಮೂರನೇ ಟ್ರೋಫಿ ಕನಸು)ನ ವಿಡಿಯೋವೀಗ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿಯೇ ಭಾರತ ತಂಡದ ಜೆರ್ಸಿಯಲ್ಲಿ ಆ್ಯಡಿಡಾಸ್ ಸಂಸ್ಥೆಯು ಎರಡು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಅದರಲ್ಲಿ ಮುಖ್ಯವಾಗಿ ಭುಜದ ಮೇಲೆ ಈ ಮೊದಲು 3 ಬಿಳಿ ಗೆರೆಗಳಿದ್ದವು, ಇದೀಗ ವಿಶ್ವಕಪ್ ಟೂರ್ನಿಯ ಜೆರ್ಸಿಯಲ್ಲಿ ಆ ಮೂರು ಬಿಳಿ ಗೆರೆಗಳ ಬದಲಿಗೆ ತ್ರಿವರ್ಣ ಬಣ್ಣವಾಗಿರುವ ಕೇಸರಿ, ಬಿಳಿ ಹಾಗೂ ಹಸಿರಿನ ಗೆರೆಗಳನ್ನು ಅಳವಡಿಸಲಾಗಿದೆ. ಇದು ಭಾರತದ ಧ್ವಜವನ್ನು ಪ್ರತಿಬಿಂಬಿಸುತ್ತದೆ.
ಇನ್ನು ಎರಡನೆಯದ್ದು, ಆಟಗಾರರ ಎದೆಯ ಭಾಗದಲ್ಲಿ ಬಿಸಿಸಿಐ ಲೋಗೋದ ಮೇಲ್ಬಾಗದಲ್ಲಿ ಎರಡು ಸ್ಟಾರ್ಗಳನ್ನು ಅಳವಡಿಸಲಾಗಿದೆ. ಇದು ಭಾರತ ಗೆದ್ದ ಎರಡು ಏಕದಿನ ವಿಶ್ವಕಪ್ ಅನ್ನು ಪ್ರತಿಬಿಂಬಿಸುತ್ತದೆ. ಈ ಮೊದಲು ಬಿಸಿಸಿಐ ಲೋಗೋದ ಮೇಲೆ ಮೂರು ಸ್ಟಾರ್ಗಳಿದ್ದವು. ನಂಬಿಕೆಗಳು ಬೇರೂರಿವೆ, ಯಾವುದೂ ಅಸಾಧ್ಯವಲ್ಲ ಎನ್ನುವ ಸಂದೇಶವನ್ನು ಆ್ಯಡಿಡಾಸ್ ವಿಡಿಯೋದಲ್ಲಿ ಸಾರಿ ಹೇಳಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಂದು ಆರಂಭವಾಗಲಿದ್ದು, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.