ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೆ ಕ್ಷಣಗಣನೆ: ಫ್ರಾನ್ಸ್‌ನ ಹೈಸ್ಪೀಡ್ ರೈಲು ಮಾರ್ಗಗಳಿಗೆ ಕಿಡಿಕೇಡಿಗಳ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಫ್ರಾನ್ಸ್‌ನ ಹೈಸ್ಪೀಡ್ ರೈಲು ಮಾರ್ಗಗಳಿಗೆ ಕಿಡಿಕೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದಾಗಿ ರೈಲು ಪ್ರಯಾಣಕ್ಕೆ ಅಡಚಣೆಯುಂಟಾಗಿದೆ.ಇದರಿಂದ ಸುಮಾರು 8 ಲಕ್ಷಕ್ಕೂ ಅಧಿಕ ರೈಲು ಪ್ರಯಾಣಿಕರಿಗೆ ತೊಂದರೆಯಾಗಿದೆ.

ವಿಶ್ವದ ಮಹಾ ಕ್ರೀಡಾಕೂಟ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಂತಹ ಕೃತ್ಯ ನಡೆದಿರುವುದು ಭದ್ರತಾ ಲೋಪಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ.

ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗುರಿಯಾಗಿಸುಕೊಂಡು ಈ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಈ ದಾಳಿಯಿಂದ ರೈಲು ಸೇವೆ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಫ್ರಾನ್ಸ್‌ನ ರಾಷ್ಟ್ರೀಯ ರೈಲು ನಿರ್ವಾಹಕ ಎಸ್‌ಎನ್‌ಸಿಎಫ್ ತನ್ನ ಹೈಸ್ಪೀಡ್ ರೈಲು ಮಾರ್ಗಗಳ ಮೇಲೆ ವಿಧ್ವಂಸಕ ದಾಳಿ ನಡೆದಿದ್ದು, ಇದರಿಂದಾಗಿ ರೈಲು ಸೇವೆಗಳು ದೊಡ್ಡ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿವೆ ಎಂದಿದೆ.

ಈ ದಾಳಿಯಿಂದ ಫ್ರಾನ್ಸ್‌ನ ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳ ರೈಲು ಮಾರ್ಗಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ದೇಶೀಯ ರೈಲುಗಳಷ್ಟೇ ಅಲ್ಲ, ಚಾನೆಲ್ ಟನಲ್ ಮೂಲಕ ನೆರೆಯ ದೇಶಗಳಾದ ಬೆಲ್ಜಿಯಂ ಮತ್ತು ಲಂಡನ್​ಗೆ ತೆರಳುವ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.

ಈಗಾಗಲೇ ಫ್ರೆಂಚ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು, SNCF ಈ ದಾಳಿಯನ್ನು ದುರುದ್ದೇಶಪೂರಿತ ಕೃತ್ಯ ಎಂದಿದ್ದು, ಈ ವಿಧ್ವಂಸಕ ಕೃತ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ಈ ಘಟನೆಯನ್ನು ಫ್ರೆಂಚ್ ಸರ್ಕಾರಿ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ದಿ ಗಾರ್ಡಿಯನ್ ವರದಿಯ ಪ್ರಕಾರ, ಫ್ರಾನ್ಸ್‌ನ ಕ್ರೀಡಾ ಸಚಿವರು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಕ್ರೀಡೆಯನ್ನು ಗುರಿಯಾಗಿಸುವುದು ಫ್ರಾನ್ಸ್‌ನನ್ನೇ ಗುರಿಯಾಗಿಸುವುದಕ್ಕೆ ಸಮ ಎಂದಿದ್ದಾರೆ. ಈ ದಾಳಿಯಿಂದಾಗಿ ಸುಮಾರು 8 ಲಕ್ಷ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ ಎಂದು ಎಸ್‌ಎನ್‌ಸಿಎಫ್ ಮುಖ್ಯ ಕಾರ್ಯನಿರ್ವಾಹಕ ಜೀನ್ ಪಿಯರ್ ಹೇಳಿದ್ದಾರೆ.

ಸೀನ್ ನದಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ
ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಫ್ರಾನ್ಸ್‌ನಲ್ಲಿ ವಿಶಿಷ್ಟ ಶೈಲಿಯಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಸಂಪೂರ್ಣ ಕಾರ್ಯಕ್ರಮವು ಐಫೆಲ್ ಟವರ್ ಮತ್ತು ಸೀನ್ ನದಿಯಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 10500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದಲ್ಲದೆ, ಈ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಮತ್ತು ಅತಿಥಿಗಳು ಆಗಮಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!