ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಾಳೆ ನೆರವೇರಲಿದ್ದು, ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರರಾಗಿದ್ದಾರೆ.
ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ನಾಳೆ ಮಧ್ಯಾಹ್ನ 1 ರಿಂದ 1:18 ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀ ಧ್ವಜಕ್ಕೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಂಜೆ 4:42ರಿಂದ 5 ಗಂಟೆ 6 ನಿಮಿಷಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿಗೆ ಪುಪ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ. ಆರನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಬನ್ನಿ ಮಂಟಪದವರೆಗೆ ಸಾಗಲಿದೆ. ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳಾಗಿ ಸಾಥ್ ನೀಡಲಿವೆ. ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿ ಮುನ್ನಡೆಯಲಿದೆ.
ಈ ಬಾರಿ ಮೆರವಣಿಗೆಯಲ್ಲಿ 58 ಸ್ತಬ್ಧ ಚಿತ್ರಗಳು 125ಕ್ಕೂ ಹೆಚ್ಚು ಕಲಾತಂಡಗಳು 14 ಆನೆಗಳು ಅಶ್ವಾರೋಹಿ ಪಡೆಗಳು ಭಾಗವಹಿಸಲಿವೆ. ಭದ್ರತೆಯ ದೃಷ್ಟಿಯಿಂದ ಈ ಬಾರಿ ಡ್ರೋನ್ ಕಣ್ಗಾವಲು ಇರಲಿದೆ. ಈಗಾಗಲೇ ಇರುವ 30 ಸಾವಿರದ 614 ಸಿಸಿಟಿವಿ ಕ್ಯಾಮೆರಗಳ ಜೊತೆಗೆ ಹೆಚ್ಚುವರಿಯಾಗಿ 200 ಸಿಸಿಟಿವಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಜಂಬೂಸವಾರಿ ಮುಗಿದ ಬಳಿಕ ರಾತ್ರಿ 7 ಗಂಟೆಗೆ ಬನ್ನಿ ಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಜಂಬೂಸವಾರಿಗೆ ಕ್ಷಣಗಣನೆ: ಸಾಂಸ್ಕೃತಿಕ ನಗರಿಯ ಗಲ್ಲಿಗಲ್ಲಿಗೆ 30,614 ಕ್ಯಾಮರಾ, ಡ್ರೋನ್ ಕಣ್ಗಾವಲು!
