ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2ರಂದು (ಇಂದು) ಬೆಳಗ್ಗೆ 11:50ಕ್ಕೆ ಆದಿತ್ಯ-ಎಲ್1 ಸೂರ್ಯನ ಶಿಖಾರಿಗೆ ಉಡಾವಣೆಯಾಗಲಿದ್ದು, ಇದರ ಮುನ್ನ ಇಸ್ರೋ ಹೊಸ ಮಾಹಿತಿ ಹಂಚಿಕೊಂಡಿದೆ.
ಈ ಕುರಿತು ಬ್ರೋಚರ್ ಬಿಡುಗಡೆ ಮಾಡಿದ್ದು ,ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11:50 ಕ್ಕೆ ಪಿಎಸ್‌ಎಲ್ವಿ-ಸಿ 57 ರಾಕೆಟ್ ಮೂಲಕ ಆದಿತ್ಯ-ಎಲ್ 1 ಅನ್ನು ಉಡಾವಣೆ ಮಾಡಲಾಗುವುದು.ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾದ 7 ವಿಭಿನ್ನವಾದ ಪೇಲೋಡ್‌ಗಳನ್ನು (ಉಪಕರಣ) ಹೊಂದಿದೆ. ಏಳರ ಪೈಕಿ ಇಸ್ರೋ ಐದು ಮತ್ತು ಇಸ್ರೋ ಸಹಯೋಗದೊಂದಿಗೆ ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಎರಡು ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಿವೆ. ಸಂಸ್ಕೃತದಲ್ಲಿ ಆದಿತ್ಯ ಎಂದರೆ ಸೂರ್ಯ. ಎಲ್1 ಎಂಬುದು ಬಾಹ್ಯಾಕಾಶದಲ್ಲಿ ಉಪಗ್ರಹ ನಿಲ್ಲುವ ಲಾಗ್ರೇಂಜ್ ಪಾಯಿಂಟ್-1 (Lagrange Point-1) ಎಂದು ಇಸ್ರೋ ಹೇಳಿದೆ.
ನೌಕೆ ಸೂರ್ಯ ಮತ್ತು ಭೂಮಿ ಎರಡು ಆಕಾಶಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದಲ್ಲಿರುತ್ತವೆ. ಎರಡಕ್ಕೂ ಸಂಬಂಧಿಸಿದಂತೆ ಅಲ್ಲಿರಿಸಲಾದ ವಸ್ತುವು ತುಲನಾತ್ಮಕವಾಗಿ ಸ್ಥಿರವಾಗಿರಲು ಇದು ಅನುವು ಮಾಡಿಕೊಡುತ್ತದೆ. ಉಡಾವಣೆಯ ನಂತರ, ಆದಿತ್ಯ-ಎಲ್1 16 ದಿನಗಳ ಕಾಲ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತದೆ. ಈ ಸಮಯದಲ್ಲಿ ತನ್ನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಪಡೆಯಲು ಐದು ಕುಶಲತೆಗೆ ಒಳಗಾಗುತ್ತದೆ ಎಂದು ಮಾಹಿತಿ ನೀಡಿದೆ.
ಜೊತೆಗೆ ಮೂರು ಪ್ರಮುಖ ಅಂಶವನ್ನು ತಿಳಿಸಿದ ಇಸ್ರೋ:
1. ಆದಿತ್ಯ-ಎಲ್1 ಭೂಮಿಯಿಂದ ಸೂರ್ಯನ ಕಡೆಗೆ ಸರಿಸುಮಾರು 1.5 ಮಿಲಿಯನ್ ಕಿಮೀ(15 ಲಕ್ಷ ಕಿ.ಮೀ) ದೂರದಲ್ಲಿ ನಿಲ್ಲುತ್ತದೆ. ಇದು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಸುಮಾರು ಶೇ.1ರಷ್ಟು ಮಾತ್ರ!.
2. ಸೂರ್ಯನ ಹೊರಗಿನ ವಾತಾವರಣದ ಅಧ್ಯಯನ: ಸೂರ್ಯ ಅನಿಲಗಳನ್ನು ತುಂಬಿಕೊಂಡಿರುವ ದೈತ್ಯ ಗೋಳ. ಆದಿತ್ಯ-ಎಲ್1 ಸೂರ್ಯನ ಹೊರಗಿನ ವಾತಾವರಣದ ಅಧ್ಯಯನ ಮಾಡುತ್ತದೆ.
3. ಆದಿತ್ಯ-ಎಲ್1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪವೂ ಹೋಗುವುದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ.