ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಎರಡನೇ ಚಿತ್ರ ‘ಎಕ್ಕ’ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಸದ್ಯ ಚಿತ್ರ ತಂಡ ಪ್ರಚಾರದಲ್ಲೇ ಬ್ಯುಸಿ ಆಗಿದೆ. ಇದೇ ವೇಳೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ‘ಪಕ್ಕಾ ರಾ ಕಮರ್ಷಿಯಲ್ ಮಾಸ್ ಎಂಟರ್‌ಟೈನರ್’ ಎಂದು ಹೇಳಲಾಗುತ್ತಿದೆ.
ಚಿತ್ರದ ಕಥೆ ಹಳ್ಳಿ ಬಿಟ್ಟು ನಗರಕ್ಕೆ ಬಂದ ಒಬ್ಬ ಸಾಮಾನ್ಯ ಹುಡುಗನ ದಾರಿ ಮತ್ತು ಅವನು ಹೇಗೆ ಅಂಡರ್ ವರ್ಲ್ಡ್ ನಲ್ಲಿ ಸೇರುತ್ತಾನೆ ಎಂಬುದರ ಮೇಲಿದ್ದು, ನಿರ್ದೇಶಕ ರೋಹಿತ್ ಪದಕಿ ಅದನ್ನು ರಾ ಶೈಲಿಯಲ್ಲಿ ಆವಿಷ್ಕರಿಸಲು ಪ್ರಯತ್ನಿಸಿದ್ದಾರೆ. ಈ ಸಿನಿಮಾದಲ್ಲಿ ಯುವರಾಜ್‌ಕುಮಾರ್ ಹೊಸ ಶೈಲಿಯ ಲುಕ್ ಮತ್ತು ಆಕ್ಷನ್ ಅಟಿಟ್ಯೂಡ್‌ನೊಂದಿಗೆ ಕಾಣಿಸಿಕೊಂಡಿದ್ದು, ಮಾಸ್ ಪ್ರೇಕ್ಷಕರ ಹೃದಯ ಗೆಲ್ಲುವ ನಿರೀಕ್ಷೆಯಿದೆ.
ಚಿತ್ರದಲ್ಲಿ ನಟ ಆದಿತ್ಯ ಡೆಡ್ಲಿ ಸೋಮ ಶೈಲಿಯ ತೀವ್ರ ಪಾತ್ರದಲ್ಲಿ, ಬಾಲಿವುಡ್‌ನ ಹಿರಿಯ ನಟ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕಿಯಾಗಿ ಸಂಜನಾ ಆನಂದ್ ಮತ್ತು ಸಂಪದಾ ಸಾಥ್ ನೀಡಿದ್ದಾರೆ. ಚಲನಚಿತ್ರಕ್ಕೆ ಸಂಗೀತವನ್ನು ಚರಣ್ ರಾಜ್ ರಚಿಸಿದ್ದು, ಛಾಯಾಗ್ರಹಣದ ಜವಾಬ್ದಾರಿಯನ್ನು ಸತ್ಯಾ ಹೆಗಡೆ ನಿಭಾಯಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜೊತೆಗೂಡಿ ಜಯಣ್ಣ ಮತ್ತು ಕಾರ್ತಿಕ್ ಗೌಡ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ‘ಪಿಆರ್‌ಕೆ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಹೊರಬರುತ್ತಿರುವ ಈ ಸಿನಿಮಾ ತಮ್ಮ ಮೊದಲ ಚಿತ್ರದ ಯಶಸ್ಸಿನ ಹಾದಿಯಲ್ಲಿ ಮುಂದುವರೆಯಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ಜುಲೈ 18 ರಂದು ಚಿತ್ರ ಚಿತ್ರಮಂದಿರ ಪ್ರವೇಶಿಸುತ್ತಿದ್ದು, ಈಗಾಗಲೇ ಯುವರಾಜ್‌ಕುಮಾರ್ ಅಭಿಮಾನಿಗಳ ನಿರೀಕ್ಷೆ ಪೀಕ್‌ಗೆ ತಲುಪಿದೆ.