ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಇನ್ನೇನು ಕೆಲವೇ ಸಮಯ ಬಾಕಿ ಇದೆ. ಇಂದು ರಾತ್ರಿ 12ಕ್ಕೆ ಕರಗ ಮಹೋತ್ಸವಕ್ಕೆ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದೆ. ಈಗಾಗಲೇ ದೇಗುಲದ ಆವರಣದಲ್ಲಿ ಸಾವಿರಾರು ಭಕ್ತರು ನೆರೆದಿದ್ದಾರೆ.
ಜಿಬಿಎ, ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಜೊತೆಗೆ ಕರಗ ಉತ್ಸವ ಸಮಿತಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಸಿಎಂ, ಡಿಸಿಎಂ ಕೂಡ ಕರಗದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. 15 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಸಾಧ್ಯತೆಯಿದೆ.
ಸಾವಿರಾರು ವರ್ಷಗಳ ಇತಿಹಾಸ ಇರುವ ಬೆಂಗಳೂರು ಕರಗಕ್ಕೆ ಅತೀವ ಭಕ್ತರಿದ್ದಾರೆ. ಪ್ರತೀ ವರ್ಷದಂತೆ ಈ ಬಾರಿಯೂ ಅದ್ಧೂರಿ ಕರಗ ನಡೆಯಲಿದೆ. ಮಾರ್ಚ್ 24ರಿಂದ ಆರಂಭವಾಗಿರುವ ಕರಗ ಉತ್ಸವದಲ್ಲಿ ಇಂದು ಕರಗ ಶಕ್ತ್ಯೋತ್ಸವದ ಸಂಭ್ರಮ. ಮಲ್ಲಿಗೆ ಹೂವಿನಿಂದ ಅಲಂಕರಿಸಿದ ಕರಗವನ್ನ 16ನೇ ಬಾರಿಗೆ ಕರಗದ ಪೂಜಾರಿ ಜ್ಞಾನೇಂದ್ರ ಹೊರಲಿದ್ದಾರೆ.
ಸಂಜೆ ಕಬ್ಬನ್ ಪಾರ್ಕ್‌ನಲ್ಲಿರುವ ಕರಗದಗುಂಟೆಯಲ್ಲಿ ಪೂಜೆ ಮಾಡಲಿದ್ದು, ಬಳಿಕ ಅಲ್ಲಿಂದ ಬಂದ ನಂತರ ಕರ್ಪೂರ ಸೇವೆ ನಡೆಯಲಿದೆ. ಸಾವಿರಾರು ಕೆ.ಜಿ ಕರ್ಪೂರ ಸೇವೆಯನ್ನ ಭಕ್ತರು ಮಾಡುತ್ತಾರೆ. ನಂತರ ಬಳೆ ಶಾಸ್ತ್ರ ನಡೆಯಲಿದೆ. ಅದಾದ ಮೇಲೆ ತಾಯಿಯನ್ನು ಆಹ್ವಾನ ಮಾಡಿಕೊಂಡು ಹೂವಿನ ಕರಗದ ದರುಶನ ಭಕ್ತರಿಗೆ ತಡರಾತ್ರಿ ಸಿಗಲಿದೆ.



