January19, 2026
Monday, January 19, 2026
spot_img

ಕೌಂಟರ್ ಪಾಲಿಟಿಕ್ಸ್: ದೆಹಲಿಯಲ್ಲಿ ಡಿಕೆಶಿ ಠಿಕಾಣಿ.. ನಾಯಕತ್ವ ಬದಲಾವಣೆ ಚರ್ಚೆಗೆ ಹೊಸ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಆಂತರಿಕ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ನಾವೆಲ್ಲ ಒಂದೇ’ ಎಂಬ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದರೂ, ಪಕ್ಷದೊಳಗಿನ ಭಿನ್ನಮತದ ಕದನ ವಿರಾಮ ಪದೇ ಪದೇ ಉಲ್ಲಂಘನೆಗೊಳ್ಳುತ್ತಲೇ ಇದೆ. ಈ ನಡುವೆ, ರಾಜ್ಯದ ಪ್ರಮುಖ ನಾಯಕರು ಏಕಕಾಲಕ್ಕೆ ದೆಹಲಿ ಪಯಣ ಬೆಳೆಸಿರುವುದು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆಯುವ ತಂತ್ರಗಾರಿಕೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕರ್ನಾಟಕದಿಂದಲೇ ಮೊದಲು ಭುಗಿಲೆದ್ದ ‘ಮತಗಳ್ಳತನ’ ಆರೋಪದ ವಿರುದ್ಧ ಬೃಹತ್ ಪ್ರತಿಭಟನೆಯು ನಾಳೆ (ಭಾನುವಾರ) ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ದೆಹಲಿ ತಲುಪಿ, ಮೂರು ದಿನಗಳ ಕಾಲ ಅಲ್ಲೇ ಠಿಕಾಣಿ ಹೂಡಲಿದ್ದಾರೆ.

ಇದರ ಜೊತೆಗೆ, ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಹ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ವೋಟ್ ಚೋರಿ ಪ್ರತಿಭಟನೆಯನ್ನು ನೆಪವಾಗಿಟ್ಟುಕೊಂಡು ದೆಹಲಿಗೆ ತೆರಳುತ್ತಿರುವ ಈ ನಾಯಕರು, ವರಿಷ್ಠರ ಮುಂದೆ ಡಿ.ಕೆ. ಶಿವಕುಮಾರ್ ಪರವಾಗಿ ‘ಬ್ಯಾಟಿಂಗ್’ ಮಾಡಿ, ಮುಖ್ಯಮಂತ್ರಿ ಬದಲಾಯಿಸುವಂತೆ ಒತ್ತಡ ಹೇರುವ ತಂತ್ರ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಹೊರಗೆ ಪ್ರತಿಭಟನೆ, ಒಳಗೆ ಅಧಿಕಾರದ ಲಾಬಿ ಇದೀಗ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಾಳಯದ ಕೇಂದ್ರಬಿಂದುವಾಗಿದೆ.

Must Read