ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿತೆಯಾಗಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಮಧ್ಯಂತರ ಜಾಮೀನನ್ನು ದೆಹಲಿ ನ್ಯಾಯಾಲಯ ನವೆಂಬರ್ 10 ರವರೆಗೆ ವಿಸ್ತರಿಸಿದೆ.
ನ್ಯಾಯಾಲಯವು ಎಲ್ಲಾ ಕಕ್ಷಿದಾರರಿಗೆ ಆರೋಪಪಟ್ಟಿ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನಿರ್ದೇಶಿಸಿದೆ. ಜಾಮೀನು ಮತ್ತು ಇತರ ಬಾಕಿ ಇರುವ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 10 ರಂದು ನಿಗದಿಪಡಿಸಲಾಗಿದೆ.
ತನಿಖಾ ಸಂಸ್ಥೆ ಇಡಿ ಆಗಸ್ಟ್ 17 ರಂದು ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೇಲಿನ್ ಅನ್ನು ಆರೋಪಿ ಎಂದು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿದೆ.
ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಅವರು ನಟಿ ಜಾಕ್ವೆಲಿನ್ ಮತ್ತು ಅವರ ಕುಟುಂಬ ಸದಸ್ಯರಿಗೆ ಹಲವಾರು ದುಬಾರಿ ಕಾರುಗಳು, ದುಬಾರಿ ಬ್ಯಾಗ್‌ಗಳು, ಬಟ್ಟೆಗಳು, ಬೂಟುಗಳು ಮತ್ತು ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ವಿವಿಧ ಉನ್ನತ ವ್ಯಕ್ತಿಗಳನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ.