Monday, November 10, 2025

60 ಕೋಟಿ ರೂ. ಠೇವಣಿ ಇಡಲು ಕೋರ್ಟ್ ಸೂಚನೆ: ವಿದೇಶ ಪ್ರವಾಸ ಕೈಬಿಟ್ಟ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿದ್ದ ಅರ್ಜಿಯನ್ನು ಗುರುವಾರ ಹಿಂಪಡೆದಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಉದ್ಯಮಿಯೊಬ್ಬರು ದಾಖಲಿಸಿರುವ 60 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರನ್ನೊಳಗೊಂಡ ಪೀಠಕ್ಕೆ ಶಿಲ್ಪಾ ಶೆಟ್ಟಿ ಪರ ವಕೀಲ ನಿರಂಜನ್ ಮುಂಡರಗಿ ಈ ಕುರಿತು ಮಾಹಿತಿ ನೀಡಿದ್ದು, ‘ಅನಿವಾರ್ಯ ಕಾರಣಗಳಿಂದ ಶಿಲ್ಪಾ ಶೆಟ್ಟಿ ಕೈಗೊಳ್ಳಬೇಕಿದ್ದ ವಿದೇಶ ಪ್ರಯಾಣ ರದ್ದಾಗಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಟ್ಟ ಏಕೈಕ ಭಾರತೀಯ ನಟಿ ಅವರಾಗಿದ್ದರು. ಆದರೆ ಅವರು ತೆರಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ .

‘ಭವಿಷ್ಯದಲ್ಲಿ ಶಿಲ್ಪಾ ಶೆಟ್ಟಿ ಅಥವಾ ಅವರ ಪತಿ ರಾಜ್ ಕುಂದ್ರಾ ವಿದೇಶಕ್ಕೆ ಪ್ರಯಾಣಿಸಲು ಬಯಸಿದರೆ, ಅನುಮತಿ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಲಿದ್ದಾರೆ. ಶಿಲ್ಪಾ ಶೆಟ್ಟಿ ಪ್ರಸ್ತುತ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹಿಂದಿನ ವಿಚಾರಣೆಯಲ್ಲಿ ಶೆಟ್ಟಿ ದಂಪತಿಯು ವಿದೇಶಕ್ಕೆ ಪ್ರಯಾಣ ಬೆಳೆಸುವುದಾದರೆ 60 ಕೋಟಿ ರೂಪಾಯಿ ಠೇವಣಿ ಇಡುವಂತೆ ನ್ಯಾಯಾಲಯ ಸೂಚಿಸಿತ್ತು.

ಗುರುವಾರ, ನ್ಯಾಯಾಲಯವು ಶಿಲ್ಪಾ ಶೆಟ್ಟಿ ಅವರ ಅರ್ಜಿ ಹಿಂಪಡೆಯುವ ಮನವಿಯನ್ನು ಅಂಗೀಕರಿಸಿದೆ ಮತ್ತು LOC ರದ್ದತಿ ಕೋರಿ ದಂಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನವೆಂಬರ್ 17ಕ್ಕೆ ಮೂಂದೂಡಿದೆ.

2015-2023 ಅವಧಿಯಲ್ಲಿ ಶಿಲ್ಪಾ ಶೆಟ್ಟಿ ದಂಪತಿ ತಮ್ಮ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ (Best Deal TV Pvt Ltd )ನಲ್ಲಿ 60 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ಉದ್ಯಮಿ ದೀಪಕ್ ಕೊಠಾರಿ ಅವರನ್ನು ಪ್ರೇರೇಪಿಸಿದ್ದರು. ಆದರೆ ಈ ಹಣವನ್ನು ದಂಪತಿಯು ವೈಯಕ್ತಿಕ ಉದ್ದೇಶಗಳಿಗಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೀಪಕ್ ಕೊಠಾರಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಕ್ ಔಟ್ ನೋಟಿಸ್ (LOC) ಹೊರಡಿಸಲಾಗಿತ್ತು.

error: Content is protected !!