June 15, 2026
Monday, June 15, 2026
spot_img

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ವೇಗಕ್ಕೆ ಕೋರ್ಟ್ ಸೂಚನೆ: ನಟ ದರ್ಶನ್‌ಗೆ ಮತ್ತೆ ಸಂಕಷ್ಟದ ಘಟ್ಟ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಇತರರು ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇದೀಗ ಮಹತ್ವದ ಹಂತ ತಲುಪಿದೆ. ಪ್ರಕರಣವನ್ನು ಅನಗತ್ಯವಾಗಿ ವಿಳಂಬ ಮಾಡದಂತೆ ಬೆಂಗಳೂರಿನ ಸಿಸಿಎಚ್-59 ಸೆಷನ್ಸ್ ನ್ಯಾಯಾಲಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸಲು ಆದೇಶಿಸಿದೆ.

ಸುಪ್ರೀಂ ಕೋರ್ಟ್ ಪ್ರಕರಣದ ತ್ವರಿತ ವಿಚಾರಣೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಸಾಕ್ಷಿಗಳ ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಉದ್ದೇಶದಿಂದ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ.

ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಂದು ವರ್ಷದೊಳಗೆ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಪ್ರತಿದಿನವೂ ವಿಚಾರಣೆಗೆ ಅವಕಾಶ ಕಲ್ಪಿಸಿ, ಯಾವುದೇ ಕಾರಣಕ್ಕೂ ಪ್ರಕರಣವನ್ನು ಮುಂದೂಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವಾದವನ್ನು ಪರಿಗಣಿಸಿದ ನ್ಯಾಯಾಧೀಶರು, ವಾರದಲ್ಲಿ ಕಡ್ಡಾಯವಾಗಿ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಬೇಕು ಎಂದು ಆದೇಶಿಸಿದರು. ಅಗತ್ಯ ಬಿದ್ದರೆ ಐದನೇ ದಿನವೂ ವಿಚಾರಣೆಗೆ ಸಿದ್ಧರಾಗುವಂತೆ ಉಭಯ ಪಕ್ಷಗಳ ವಕೀಲರಿಗೆ ಸೂಚನೆ ನೀಡಿದರು.

ಇದನ್ನೂ ಓದಿ:

ಇದರ ಜೊತೆಗೆ ಸಾಕ್ಷಿಗಳ ವಿಚಾರಣೆಗೆ ಸಂಬಂಧಿಸಿದಂತೆ ಕೂಡ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ. ವಾರಕ್ಕೆ ಕನಿಷ್ಠ ಇಬ್ಬರು ಸಾಕ್ಷಿಗಳ ಪಾಟೀಸವಾಲು ಪೂರ್ಣಗೊಳಿಸಬೇಕು ಮತ್ತು ತಿಂಗಳಿಗೆ ಕನಿಷ್ಠ ಎಂಟು ಸಾಕ್ಷಿಗಳ ವಿಚಾರಣೆ ಮುಗಿಯುವಂತೆ ಪ್ರಾಸಿಕ್ಯೂಷನ್ ಹಾಗೂ ಪ್ರತಿವಾದಿ ವಕೀಲರು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ ವಿಚಾರಣೆಯ ವೇಳೆ ಮತ್ತೊಂದು ಬೆಳವಣಿಗೆಯೂ ನಡೆದಿದೆ. ನಟ ದರ್ಶನ್ ಅವರ ಪರ ವಕೀಲರು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ಬದಲಿಗೆ, ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಅವಕಾಶ ನೀಡುವಂತೆ ವಿಶೇಷ ಅರ್ಜಿ ಸಲ್ಲಿಸಿದರು. ಆದರೆ ಈ ಮನವಿಗೆ ಸರ್ಕಾರದ ವಿಶೇಷ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯೇ ಸಾಕಾಗಿದ್ದು, ಖುದ್ದು ಹಾಜರಾತಿಯ ಅಗತ್ಯವಿಲ್ಲ ಎಂದು ಅವರು ವಾದಿಸಿದರು.

ದರ್ಶನ್ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ತನ್ನ ಅಧಿಕೃತ ಆಕ್ಷೇಪಣೆಯನ್ನು ಮಂಗಳವಾರ ಸಲ್ಲಿಸಲಿದ್ದು, ಅದರ ಬಳಿಕ ನ್ಯಾಯಾಲಯ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದಾದ್ಯಂತ ಭಾರೀ ಗಮನ ಸೆಳೆದಿದ್ದು, ಇದೀಗ ನ್ಯಾಯಾಲಯ ವಿಚಾರಣೆಗೆ ವೇಗ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !