ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ವರ್ಷದ ಅಪ್ರಾಪ್ತೆಯ ಮೇಲೆ 62 ವರ್ಷದ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇರಳದ ವಿಶೇಷ ತ್ವರಿತಗತಿ ನ್ಯಾಯಾಲಯ (ಪೋಕ್ಸೋ) ಮಹತ್ವದ ತೀರ್ಪು ನೀಡಿದೆ. ಅಪರಾಧಿಗೆ 110 ಜೈಲು ಶಿಕ್ಷೆ, 6 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ಬಾಲಕಿಯ ಮೇಲೆ 2021 ರಿಂದ ಅಂದರೆ ಮೂರು ವರ್ಷಗಳಿಂದ ಗಂಭೀರ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಕುರಿತು ವಿಚಾರಣೆ ನಡೆಸಿದ ಚೇರ್ತಲಾ ವಿಶೇಷ ತ್ವರಿತಗತಿ ನ್ಯಾಯಾಲಯ (ಪೋಕ್ಸೊ) ಅಪರಾಧಿ ರಮಣನ್ ಎಂಬಾತನಿಗೆ ಗರಿಷ್ಠ ಶಿಕ್ಷೆ ನೀಡಿದೆ.
ಮಗುವಿನ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ, ಅಪರಾಧಿ ಬೆದರಿಕೆ ಹಾಕಿದ್ದು, ಇದಕ್ಕೆ ಆತನ ಪತ್ನಿಯೂ ಸಹಕರಿಸಿದ್ದಳು. ಆದರೆ, ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು ಪ್ರಕರಣದಿಂದ ಪ್ರತ್ಯೇಕಿಸಲಾಗಿದೆ.
ಮುಖ್ಯ ಆರೋಪಿಯಾಗಿದ್ದ ರಮಣನ್ಗೆ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಒಟ್ಟಾರೆ 110 ವರ್ಷಗಳ ಜೈಲು ಶಿಕ್ಷೆ ಮತ್ತು 6 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶಿಸಿತು.
ದಂಡ ಪಾವತಿಸಲು ಸಾಧ್ಯವಾಗದಿದ್ದರೆ, ಅಪರಾಧಿಯು ಹೆಚ್ಚುವರಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು. ಅಪ್ರಾಪ್ತೆ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದು, ಸೂಕ್ತ ಪರಿಹಾರ ನೀಡುವಂತೆಯೂ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.