February 4, 2026
Wednesday, February 4, 2026
spot_img

ಸಾಲ ತೀರಿಸದ ಅರಣ್ಯಾಧಿಕಾರಿಗಳಿಗೆ ‘ಕೋರ್ಟ್’ ಶಾಕ್: ಇಲಾಖೆಯ ಪೀಠೋಪಕರಣ ಜಪ್ತಿ

ಹೊಸದಿಗಂತ ಮಂಡ್ಯ:

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾಮಗಾರಿ ಮುಗಿಸಿ ವರ್ಷಗಳೇ ಕಳೆದರೂ ಹಣ ನೀಡದೆ ಸತಾಯಿಸುತ್ತಿದ್ದ ಅರಣ್ಯ ಇಲಾಖೆಗೆ ನ್ಯಾಯಾಲಯವು ಬಿಸಿ ಮುಟ್ಟಿಸಿದೆ. ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ವಿವಿಧೆಡೆ ಅರಣ್ಯ ಇಲಾಖೆಯ ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರರಿಗೆ ದೀರ್ಘಕಾಲದಿಂದ ಹಣ ಪಾವತಿಯಾಗಿರಲಿಲ್ಲ. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಗುತ್ತಿಗೆದಾರರಿಗೆ ಪರವಾಗಿ ತೀರ್ಪು ಬಂದಿತ್ತು. ಆದರೂ ಇಲಾಖೆ ಎಚ್ಚೆತ್ತುಕೊಳ್ಳದ ಕಾರಣ, ಇಂದು ವಕೀಲರೊಂದಿಗೆ ಕಚೇರಿಗೆ ಆಗಮಿಸಿದ ಗುತ್ತಿಗೆದಾರರು ಪೀಠೋಪಕರಣಗಳನ್ನು ಸಾಗಿಸಲು ಲಾರಿ ಸಮೇತ ಸಜ್ಜಾಗಿ ಬಂದಿದ್ದರು.

ಜಪ್ತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಜಿಲ್ಲಾ ಅರಣ್ಯಾಧಿಕಾರಿಗಳು, “ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಕ್ರಮ ವಹಿಸುತ್ತೇವೆ, ಸ್ವಲ್ಪ ಸಮಯಾವಕಾಶ ನೀಡಿ” ಎಂದು ಮನವಿ ಮಾಡಿದರು. ಆದರೆ, ಇದರಿಂದ ಸಮಾಧಾನಗೊಳ್ಳದ ಗುತ್ತಿಗೆದಾರರು, “ನಿಮ್ಮ ಏನೇ ಸಮಜಾಯಿಷಿ ಇದ್ದರೂ ನ್ಯಾಯಾಲಯದಲ್ಲೇ ಹೇಳಿಕೊಳ್ಳಿ” ಎಂದು ಖಡಕ್ ಆಗಿ ಉತ್ತರಿಸಿ, ಕಚೇರಿಯಲ್ಲಿದ್ದ ಕಂಪ್ಯೂಟರ್ ಹಾಗೂ ಕುರ್ಚಿ-ಮೇಜುಗಳನ್ನು ವಾಹನಕ್ಕೆ ತುಂಬಿಸಿಕೊಂಡು ಹೋದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !