ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಮತ್ತೆ ದೇಶದಲ್ಲಿ ಹೆಚ್ಚುತ್ತಿದ್ದು , ವಿಶ್ವದ ಹಲವೆಡೆ ವ್ಯಾಪಿಸಿರುವ ಕೋವಿಡ್ನ ಹೊಸ ಮಾದರಿಯ ತಳಿ ಇದೀಗ ಭಾರತಕ್ಕೂ ಕಾಲಿಟ್ಟಿದೆ.
ಕೇರಳದ 79 ವರ್ಷದ ಮಹಿಳೆಯಲ್ಲಿ ‘ಜೆಎನ್.1’ ಎಂಬ ಈ ಮಾದರಿ ಡಿಸೆಂಬರ್ 8ರಂದು ಪತ್ತೆಯಾಗಿದೆ. ಈ ಹಿಂದೆ 3 ವರ್ಷಗಳ ಹಿಂದೆ ದೇಶದ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಕೇರಳದಲ್ಲೇ ಎಂಬುದು ಗಮನಾರ್ಹ.
ಈ ವೃದ್ಧ ಮಹಿಳೆಗೆ ನವೆಂಬರ್ 18ರಂದು ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಕೋವಿಡ್ ಇರುವುದು ಸಾಬೀತಾಗಿತ್ತು. ಜ್ವರ ರೀತಿಯ ಲಕ್ಷಣ ಕಂಡುಬಂದಿತ್ತು. ಆ ಮಹಿಳೆ ಗುಣಮುಖರಾಗಿದ್ದರು. ಆದರೆ ಈಗ ಆಕೆಯಲ್ಲಿ ಪತ್ತೆಯಾಗಿದ್ದು ಕೋವಿಡ್ನ ಹೊಸ ಮಾದರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಎನ್.1 ರೂಪಾಂತರಿ ವೈರಸ್ ಮೊದಲು ಐರೋಪ್ಯ ದೇಶವಾದ ಲುಕ್ಶಂಬರ್ಗ್ನಲ್ಲಿ ಪತ್ತೆಯಾಗಿತ್ತು. ಬಳಿಕ ವಿಶ್ವದ ಹಲವು ದೇಶಗಳಿಗೆ ವ್ಯಾಪಿಸಿದೆ. ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಲ್ಲಿ ಅ.25ರಂದು ಇದೇ ಸೋಂಕು ಕಂಡುಬಂದಿತ್ತು. ಆದರೆ ತಿರುಚಿರಾಪಳ್ಳಿ ಅಥವಾ ತಮಿಳುನಾಡಿನ ಇತರೆ ಯಾವ ಭಾಗದಲ್ಲೂ ಈ ಸೋಂಕು ಪತ್ತೆಯಾಗಿರಲಿಲ್ಲ.
ಇತ್ತೀಚೆಗೆ ಚೀನಾ ಮತ್ತು ಅಮೆರಿಕದಲ್ಲಿ ಮಕ್ಕಳಲ್ಲಿ ಭಾರೀ ಪ್ರಮಾಣದ ಕೋವಿಡ್ ಸೋಂಕು ಹೆಚ್ಚಲು ಇದೇ ಮಾದರಿ ಕಾರಣವಾಗಿತ್ತು.
ಹೇಗೆ ಭಿನ್ನ?:
ಈ ವೈರಸ್ ಹಲವು ರೂಪಾಂತರಗಳನ್ನು ಕಂಡಿರುವ ಕಾರಣ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ದೇಹದ ರೋಗನಿರೋಧಕ ಶಕ್ತಿಯನ್ನೂ ಭೇದಿಸುವ ಸಾಮರ್ಥ್ಯ ಇದಕ್ಕೆ ಅಧಿಕವಾಗಿದೆ. ಕೋವಿಡ್ ಲಸಿಕೆಯ ಮೂಲಕ ಈ ಸೋಂಕಿನಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಚಳಿಗಾಲ ತೀವ್ರಗೊಳ್ಳುತ್ತಿರುವುದರಿಂದ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಹೊಸ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಗುರುವಾರ ಜಗತ್ತಿನಲ್ಲಿ ಒಂದೇ ದಿನ 15000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಮತ್ತೆ 300ಕ್ಕೂ ಹೆಚ್ಚು ಕೇಸ್
ದೇಶದಲ್ಲಿ ಶನಿವಾರ 339 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ. ಸತತ 3 ದಿನಗಳಿಂದ ಕೋವಿಡ್ ಏರಿಕೆಯಾಗುತ್ತಿದ್ದು, ಸುಮಾರು 7 ತಿಂಗಳ ಬಳಿಕ ಕೇಸುಗಳ ಸಂಖ್ಯೆ 300ರ ಗಡಿ ದಾಟುತ್ತಿದೆ. ಪರಿಣಾಮ ಸಕ್ರಿಯ ಪ್ರಕರಣ ಸಂಖ್ಯೆ 1492ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ 98.81 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.