ಸ್ಯಾಂಡಲ್​ವುಡ್ ‘ಕೃಷ್ಣ’ನ ದಾಂಪತ್ಯದಲ್ಲಿ ಬಿರುಕು: ನಟ ಅಜಯ್ ರಾವ್ ವಿರುದ್ಧ ದೂರು ನೀಡಿದ ಪತ್ನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿರುವ ಜನಪ್ರಿಯ ನಟ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಗಂಭೀರ ಬದಲಾವಣೆ ಕಂಡುಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಅಜಯ್ ರಾವ್ ಮತ್ತು ಪತ್ನಿ ಸಪ್ನಾ ಈಗ ವಿಚ್ಛೇದನದ ಹಾದಿ ಹಿಡಿಯುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಘಟನೆ ಅಭಿಮಾನಿಗಳಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡುವ ನಿಜವಾದ ಕಾರಣಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

2014 ರಲ್ಲಿ ಹೊಸಪೇಟೆಯಲ್ಲಿ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದ ಈ ಜೋಡಿಗೆ ಚರಿಷ್ಮಾ ಎಂಬ ಮಗಳು ಇದ್ದಾಳೆ. 11 ವರ್ಷದ ದಾಂಪತ್ಯ ಬದುಕಿನ ಬಳಿಕ ಈಗ ಬೇರಾಗಲು ನಿರ್ಧರಿಸಿರುವ ಈ ನಿರ್ಧಾರ ಅಭಿಮಾನಿಗಳಿಗೂ ಅಚ್ಚರಿಯಾಗಿದೆ. ಇನ್ನೊಂದೆಡೆ, ಸಪ್ನಾ ಅವರು ಪತಿ ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ. ಮಗಳು ಚರಿಷ್ಮಾ ಸಹ ಅಜಯ್ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಗಳಲ್ಲಿ ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಬೇಕಿದೆ.

ಅಜಯ್ ರಾವ್ 2003ರಲ್ಲಿ ಬಿಡುಗಡೆಯಾದ ‘ಎಕ್ಸ್ಕ್ಯೂಸ್ ಮೀ’ ಚಿತ್ರದಿಂದ ನಾಯಕನಾಗಿ ತಮ್ಮ ಪಯಣ ಪ್ರಾರಂಭಿಸಿದರು. ಅದಕ್ಕೂ ಮುನ್ನ ಸುದೀಪ್ ನಟನೆಯ ‘ಕಿಚ್ಚ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ‘ತಾಜ್ ಮಹಲ್’, ‘ಪ್ರೇಮ್ ಕಹಾನಿ’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ-ಲೀಲಾ’ ಮುಂತಾದ ಯಶಸ್ವಿ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇತ್ತೀಚೆಗೆ ‘ಯುದ್ಧಕಾಂಡ 2’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಈಗ ಅಜಯ್ ರಾವ್ ಅವರ ವೈಯಕ್ತಿಕ ಬದುಕಿನಲ್ಲಿ ನಡೆದಿರುವ ಈ ಬದಲಾವಣೆ, ಅವರ ವೃತ್ತಿಜೀವನ ಮತ್ತು ಅಭಿಮಾನಿಗಳ ಭಾವನೆಗಳ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!