ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಫರೀದಾಬಾದ್‌ನಲ್ಲಿರುವ ಜೆವರ್ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿರ್ಮಾಣ ಹಂತದ ಫ್ಲೈಓವರ್ ಬಳಿ ಭಾರೀ ಗಾತ್ರದ ಕ್ರೇನ್ ಉರುಳಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕ್ರೇನ್ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ.
ಕೆಸರಿನಿಂದಾಗಿ ತಪ್ಪಿದ ಸಮತೋಲನ
ಗುರುವಾರ ಸಂಜೆ ಫ್ಲೈಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಭಾರೀ ಗಾತ್ರದ ಗಿರ್ಡರ್ ಅನ್ನು ಎತ್ತುವ ಸಂದರ್ಭದಲ್ಲಿ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾಗಿದ್ದ ಕೆಸರಿನ ಕಾರಣ ಕ್ರೇನ್ ತನ್ನ ಸಮತೋಲನ ಕಳೆದುಕೊಂಡು ವಾಲಿತ್ತು. ಅಪಘಾತದ ವೇಳೆ ಸ್ಥಳದಲ್ಲಿ ಒಟ್ಟು ಏಳು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಲ್ಲಿ ನಾಲ್ವರು ಕ್ರೇನ್ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಸವಾಲಿನ ನಡುವೆ ರಕ್ಷಣಾ ಕಾರ್ಯಾಚರಣೆ
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಅತ್ಯಾಧುನಿಕ ಉಪಕರಣಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು, ಸ್ಥಳೀಯ ನಿವಾಸಿಗಳ ಸಹಾಯದೊಂದಿಗೆ ರಕ್ಷಣಾ ಕಾರ್ಯ ಆರಂಭಿಸಿದವು. ಮಳೆ ಹಾಗೂ ಕೆಸರಿನ ಸವಾಲಿನ ನಡುವೆಯೂ ಕ್ರೇನ್ ಅಡಿಯಲ್ಲಿದ್ದ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
“ಘಟನೆಯ ವರದಿ ಬಂದ ತಕ್ಷಣವೇ ನಮ್ಮ ತಂಡ ಸ್ಥಳಕ್ಕೆ ಧಾವಿಸಿತು. ಕ್ರೇನ್ ಅಡಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಸದ್ಯ ಸ್ಥಳದಲ್ಲಿ ಯಾವುದೇ ಅಪಾಯವಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ” ಎಂದು ಎಸ್‌ಡಿಆರ್‌ಎಫ್ ತಂಡದ ಎಎಸ್‌ಐ ಅಮರ್‌ಜೀತ್ ಸಿಂಗ್ ತಿಳಿಸಿದ್ದಾರೆ.



