ನಮ್ಮಲ್ಲಿ ಹೆಚ್ಚಿನವರಿಗೆ ಊಟ ಮುಗಿದ ನಂತರ ಏನಾದರೂ ಸಿಹಿ ತಿನ್ನಲೇಬೇಕು ಅನಿಸುವುದು ಸಹಜ. ಅದರಲ್ಲೂ ಒಂದು ತುಂಡು ಚಾಕೊಲೇಟ್ ಬಾಯಿಗೆ ಹಾಕಿಕೊಳ್ಳದಿದ್ದರೆ ಊಟವೇ ಪೂರ್ಣವಾಗದಂತೆ ಭಾಸವಾಗುತ್ತದೆ. ಈ ಅಭ್ಯಾಸ ಕೇವಲ ನಾಲಿಗೆಯ ರುಚಿಗಾಗಿ ಮಾತ್ರವಲ್ಲ, ಇದರ ಹಿಂದೆ ಕೆಲವು ಆಸಕ್ತಿದಾಯಕ ವೈಜ್ಞಾನಿಕ ಮತ್ತು ಮಾನಸಿಕ ಕಾರಣಗಳಿವೆ.
ಚಾಕೊಲೇಟ್ ತಿಂದ ತಕ್ಷಣ ಮೆದುಳಿನಲ್ಲಿ ‘ಸೆರೊಟೋನಿನ್’ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನಮಗೆ ಸಂತೋಷ ಮತ್ತು ನಿರಾಳತೆಯ ಭಾವನೆ ನೀಡುತ್ತದೆ. ಊಟದ ನಂತರ ಬರುವ ಆಲಸ್ಯವನ್ನು ಹೋಗಲಾಡಿಸಲು ಮನಸ್ಸು ಈ ಶಾರ್ಟ್‌ಕಟ್ ಹುಡುಕುತ್ತದೆ.
ನಾವು ತಿಂದ ಊಟ ಜೀರ್ಣವಾಗುವ ಪ್ರಕ್ರಿಯೆಯಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಳಿಕೆಯಾಗುತ್ತದೆ. ಈ ಸಮಯದಲ್ಲಿ ದೇಹವು ತ್ವರಿತ ಶಕ್ತಿಯನ್ನು ಬಯಸುತ್ತದೆ, ಆಗ ಚಾಕೊಲೇಟ್ ತಿನ್ನಬೇಕು ಎಂಬ ತೀವ್ರ ಇಚ್ಛೆ ಉಂಟಾಗುತ್ತದೆ.
ಬಾಲ್ಯದಿಂದಲೂ “ಊಟ ಮುಗಿಸಿದರೆ ಚಾಕೊಲೇಟ್ ಕೊಡುತ್ತೇನೆ” ಎಂಬ ಬಹುಮಾನದ ಸಂಸ್ಕೃತಿಯಲ್ಲಿ ಬೆಳೆದಿದ್ದರೆ, ನಮ್ಮ ಮೆದುಳು ಊಟದ ನಂತರ ಸಿಹಿಯನ್ನು ನಿರೀಕ್ಷಿಸಲು ಶುರು ಮಾಡುತ್ತದೆ.
ಸ್ವಲ್ಪ ಪ್ರಮಾಣದ ಡಾರ್ಕ್ ಚಾಕೊಲೇಟ್ ಜೀರ್ಣಕ್ರಿಯೆಗೆ ಸಹಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹಕ್ಕೆ ಒಳ್ಳೆಯದು ಎಂಬ ನಂಬಿಕೆಯೂ ಈ ಅಭ್ಯಾಸಕ್ಕೆ ಕಾರಣವಾಗಿರಬಹುದು.
ಮಿತವಾದ ಚಾಕೊಲೇಟ್ ಸೇವನೆ ವಿಶೇಷವಾಗಿ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಪೂರಕ. ಆದರೆ ಅತಿಯಾದ ಸಕ್ಕರೆಯುಕ್ತ ಚಾಕೊಲೇಟ್ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.



