ಹೊಸದಿಗಂತ ಡಿಟಿಟಲ್ ಡೆಸ್ಕ್:
ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸಿ ಎಂದು ರಾಜ್ಯದ ಮಾಜಿ ಸಚಿವ ವಿ. ಸೋಮಣ್ಣ ಅವರು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನ ಪ್ರತಿಪಾದನೆ ಮತ್ತು ಅದರಿಂದ ಆಗುವ ಸಾಧಕ- ಬಾಧಕಗಳ ಅರಿವು ಮೂಡಿಸುವುದು ಶ್ಲಾಘನೀಯ ಎಂದರು.
ಈ ದೇಶವನ್ನು ಮುಂದಿನ ಪೀಳಿಗೆಯು ಎಂಥ ಸಂದರ್ಭದಲ್ಲೂ ವಿಚಲಿತರಾಗದೆ ಕೆಲಸ ಮಾಡುವ ಮಾದರಿಯಲ್ಲಿ ಸಮರ್ಪಕ ಸಂದೇಶವನ್ನು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ ಎಂದು ತಿಳಿಸಿದರು.
ರಾಜಕಾರಣದಲ್ಲಿ ಅಧಿಕಾರ, ಅಧಿಕಾರ ಇದ್ದಾಗ ನಡವಳಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರಲ್ಲದೆ, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಕರಾಳ ದಿನಗಳನ್ನು ನಮ್ಮೆದುರಿಗೆ ಇಟ್ಟಿದ್ದರು ಎಂದು ನೆನಪಿಸಿದರು. ಅಂತಹ ಸಂದರ್ಭ ಬರದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿಯವರು ತಿಳಿಸಿದ್ದಾರೆ ಎಂದರು.
ಹೊಟ್ಟೆಪಾಡಿಗಾಗಿ ಅಪಚಾರದ ಜೀವನ ಮಾಡಬಾರದು ಎಂದ ಅವರು, ಜನರಿಗೆ ಕಾನೂನಿನ ಅರಿವು ಸರಿಯಾಗಿ ತಲುಪಿಲ್ಲ. ಗಳಿಕೆ, ಆದಾಯ, ಸಂಪಾದನೆ ಮುಖ್ಯವಲ್ಲ. ನಿಜವಾದ ಅಗತ್ಯ ಇರುವವರಿಗೆ ಸಹಾಯ ಮಾಡಿದರೆ ಅದರಿಂದ ಮಾನಸಿಕ ತೃಪ್ತಿ ಸಿಗುತ್ತದೆ ಎಂದು ವಿಶ್ಲೇಷಿಸಿದರು.
ಬುದ್ಧಿಜೀವಿ ವಕೀಲರು ಕಾನೂನನ್ನು ಸರಿಯಾದ ದಾರಿಯಲ್ಲಿ ಒಯ್ಯಬಲ್ಲರು ಎಂದು ನುಡಿದ ಅವರು, ಬಡತನ ಶಾಶ್ವತ ಶಾಪವಲ್ಲ. ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಕೋಷ್ಠ ತನ್ನನ್ನು ತೊಡಗಿಸಿಕೊಳ್ಳಲಿ ಎಂದು ಆಶಿಸಿದರು. ಕಾನೂನು ಎಂಬುದು ಡಾ. ಅಂಬೇಡ್ಕರ್ ಅವರು ನೀಡಿರುವ ದೊಡ್ಡ ಕೊಡುಗೆ. ನಿಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಮನವಿ ಮಾಡಿದರು.
ಈ ವೇಳೆ ಪಕ್ಷಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪಕ್ಷದ ನೆಲೆ, ಗಟ್ಟಿತನ, ಸಂದೇಶ ವಿಸ್ತರಣೆಗೆ ಪ್ರಯತ್ನಿಸಿದರೆ ಅದರ ಪ್ರತಿಫಲ ನಮಗೆ ಸಿಗುತ್ತದೆ ಎಂದರು. ತಮಗೆ ರಾಜಕೀಯ ತಿರುವು ನೀಡಿದ ಸಂದರ್ಭಗಳನ್ನು ವಿವರಿಸಿದರು. ಅದರ ಜೊತೆಗೆ ನರೇಂದ್ರ ಮೋದಿಜಿ ಅವರಿಗೆ ಅಮೆರಿಕದ ಆಹ್ವಾನ ಬಹುದೊಡ್ಡದು ಎಂದು ಶ್ಲಾಘಿಸಿದರು.