ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಅಚ್ಚರಿಯ ರೀತಿಯಲ್ಲಿ 30 ರನ್‌ಗಳಿಂದ ಸೌತ್ ಆಫ್ರಿಕಾ ವಿರುದ್ಧ ಪರಾಭವ ಕಂಡಿದೆ. 15 ವರ್ಷಗಳ ನಂತರ ಸೌತ್ ಆಫ್ರಿಕಾ ಭಾರತವನ್ನು ಟೆಸ್ಟ್‌ನಲ್ಲಿ ಮಣಿಸಿರುವುದು ಗಮನಾರ್ಹ ಸಂಗತಿ.
ಮೊದಲ ಇನಿಂಗ್ಸ್‌ನಲ್ಲಿ 159 ರನ್‌ಗಳಿಗೆ ಆಲೌಟ್ ಆದ ಆಫ್ರಿಕಾ, ಭಾರತಕ್ಕಿಂತ 30 ರನ್ ಹಿನ್ನಡೆಯಲ್ಲಿದ್ದರೂ, ಎರಡನೇ ಇನಿಂಗ್ಸ್‌ನಲ್ಲಿ 153 ರನ್ ಸೇರಿಸಿ ಒಟ್ಟು 124 ರನ್ ಗುರಿ ನೀಡಿತು. ಆದರೆ ಭಾರತದ ಬ್ಯಾಟಿಂಗ್ ಘಟಕ ಕೇವಲ 93 ರನ್‌ಗಳಲ್ಲೇ ಕುಸಿದು, ನಿರೀಕ್ಷೆಗೂ ಮೀರಿ ಹೀನಾಯ ಸೋಲಿನ ನೋವನ್ನು ಅನುಭವಿಸಿತು.
ಈ ಸೋಲಿನ ನಂತರ ಇಂಗ್ಲೆಂಡ್‌ನ ಮಾಜಿ ನಾಯಕ ಕೇವಿನ್ ಪೀಟರ್ಸನ್ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ನ ದಿಕ್ಕು ಬದಲಾವಣೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಿನ ಬ್ಯಾಟರ್‌ಗಳು ತಾಂತ್ರಿಕ ಕೌಶಲ್ಯಕ್ಕಿಂತ ದೊಡ್ಡ ಹೊಡೆತಗಳತ್ತ ಹೆಚ್ಚು ಒತ್ತು ನೀಡುತ್ತಿರುವುದು ಟೆಸ್ಟ್ ಕ್ರಿಕೆಟ್‌ನ ಗುಣಮಟ್ಟಕ್ಕೆ ಹೊಡೆತ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕ್ರೀಸ್‌ನಲ್ಲಿ ಉಳಿಯುವ ತಾಳ್ಮೆ, ಇನ್ನಿಂಗ್ಸ್ ಕಟ್ಟುವ ಕಲೆಯಂತಹ ಮೂಲಭೂತ ಕೌಶಲ್ಯಗಳು ಕಾಣೆಯಾಗುತ್ತಿವೆ ಎಂದು ಪೀಟರ್ಸನ್ ವಿಷಾದ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಈಗ ಪ್ರಕಾಶಮಾನ ದೀಪಗಳು, ಜೋರಾದ ಸಂಗೀತ ಮತ್ತು ಆರ್ಥಿಕ ಲಾಭದ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಅವರು ಟೀಕಿಸಿದ್ದಾರೆ. ಖಾಸಗಿ ಷೇರು, ಬೋರ್ಡ್‌ಗಳ ಹಣಕಾಸಿನ ಆಸಕ್ತಿ ಮತ್ತು ವಾಣಿಜ್ಯ ಒತ್ತಡಗಳು ನಿಜವಾದ ಸಮಸ್ಯೆಯಾಗಿದ್ದರೂ, ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಯಾರಿಗೂ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಆಟಗಾರರ ಮೇಲೆ ದೂಷಣೆ ಹಾಕುವುದು ಸರಿಯಲ್ಲ ಎಂದು ಹೇಳಿದ ಪೀಟರ್ಸನ್, ಈಗಿನ ವ್ಯವಸ್ಥೆಯು ಏನೆನ್ನುತ್ತದೆಯೋ ಅದೇ ರೀತಿಯಲ್ಲಿ ಆಟಗಾರರು ಆಡಬೇಕಾಗುತ್ತದೆ ಎಂದಿದ್ದಾರೆ. ಸಿಕ್ಸ್‌ಗಳನ್ನು ಹೊಡೆಯುವ ಆಟ, ಸ್ವಿಚ್-ಹಿಟ್‌ಗಳ ಆಕರ್ಷಣೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವ ದಿಸೆಯಲ್ಲಿ ಕ್ರಿಕೆಟ್ ಸಾಗುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.

