October 19, 2026
Monday, October 19, 2026
spot_img

ಅತ್ತ ಟಿ20 ವಿಶ್ವಕಪ್ ಗೆದ್ದ ಸಂಭ್ರಮ..ಇತ್ತ ಟೀಂ ಇಂಡಿಯಾದ ಆಟಗಾರನಿಗೆ ಕೂಡಿಬಂತು ಕಂಕಣ ಭಾಗ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸುತ್ತಿದೆ. ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ.

ಇದರ ನಡುವೆ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮಾರ್ಚ್ 14 ರಂದು ವಂಶಿಕಾ ಅವರನ್ನು ವಿವಾಹವಾಗಲಿದ್ದಾರೆ.

ವಿವಾಹ ಸಮಾರಂಭವು ಉತ್ತರಾಖಂಡದ ಮುಸ್ಸೂರಿಯ ಸುಂದರ ಗಿರಿಧಾಮದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ನಿಕಟ ಸಂಬಂಧಿಗಳು ಮತ್ತು ಎರಡೂ ಕುಟುಂಬಗಳ ಆಯ್ದ ಅತಿಥಿಗಳು ಭಾಗವಹಿಸಲಿದ್ದಾರೆ.

ಮದುವೆಗೆ ಒಂದು ದಿನ ಮೊದಲು ಮಾರ್ಚ್ 13 ರಂದು ಅರಿಶಿನ ಮತ್ತು ಮೆಹೆಂದಿ ಸಮಾರಂಭವನ್ನು ಆಯೋಜಿಸಲಾಗಿದೆ. ವಾಸ್ತವವಾಗಿ ಜೂನ್ 4, 2025 ರಂದು ಕುಲ್ದೀಪ್ ಮತ್ತು ವಂಶಿಕಾ ಲಕ್ನೋದ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಇಬ್ಬರ ವಿವಾಹವು ನವೆಂಬರ್ 2025 ಕ್ಕೆ ನಿಗದಿಯಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ತಂಡದ ಕಾರ್ಯನಿರತ ಕ್ಯಾಲೆಂಡರ್ ಮತ್ತು ಟಿ20 ವಿಶ್ವಕಪ್ ತಂಡದಲ್ಲಿ ಕುಲ್ದೀಪ್ ಅವರ ಆಯ್ಕೆಯಿಂದಾಗಿ, ವಿವಾಹ ದಿನಾಂಕವನ್ನು ಮುಂದೂಡಲಾಯಿತು.

ಕುಲ್ದೀಪ್ ಯಾದವ್ ಅವರ ತಂದೆ ರಾಮ್‌ಸಿನ್ಹ್ ಯಾದವ್ ಅವರು ಮಾರ್ಚ್ 8 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಆರತಕ್ಷತೆಗೆ ಹಾಜರಾಗಲು ಆಹ್ವಾನ ನೀಡಿದ್ದಾರೆ. ವಿವಾಹದ ನಂತರ, ಮಾರ್ಚ್ 17 ರಂದು ಲಕ್ನೋದ ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಆರತಕ್ಷತೆ ಏರ್ಪಡಿಸಲಾಗಿದೆ.

Must Read