ಹೊಸದಿಗಂತ ಡಿಜಿಟಲ್ ಡೆಸ್ಕ್
ಇದೇ ಶನಿವಾರದಿಂದ (ಆಗಸ್ಟ್ 27)ರಿಂದ ಏಷ್ಯಾಕಪ್ ಪ್ರಾರಂಭವಾಗಲಿದೆ. ಭಾರತ ತಂಡವು ಪಾಕ್ ವಿರುದ್ದದ ಪಂದ್ಯದ ಮೂಲಕ ಭಾನುವಾರ ತನ್ನ ಅಭಿಯಾನವನ್ನು ಆರಂಭಿಸಲಿದೆ. ಏಷ್ಯಾಕಪ್ ನಲ್ಲಿ ಆಟಗಾರರು ತೋರುವ ಪ್ರದರ್ಶನದ ಆಧಾರದ ಮೇಲೆ ಟಿ20 ವಿಶ್ವಕಪ್ ಗೆ ಆಟಗಾರರ ಆಯ್ಕೆ ನಡೆಯಲಿದೆ.
ಟಿ20 ಸ್ಪೆಷಲಿಸ್ಟ್‌ಗಳೆಂದು ಪರಿಗಣಿಸಲ್ಪಟ್ಟಿರುವ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರು ಏಷ್ಯಾಕಪ್‌ನಿಂದ ಹೊರಗುಳಿದಿರುವುದು ತಂಡದ ಮ್ಯಾನೇಜ್ ಮೆಂಟ್‌ಗೆ ಕಳವಳ ಉಂಟುಮಾಡಿದೆ. ಆರಂಭಿಕ ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ. ತಂಡ ಇತ್ತೀಚಿನ ಪಂದ್ಯಗಳಲ್ಲಿ ಗಾಯಾಳು ರಾಹುಲ್ ಸ್ಥಾನದಲ್ಲಿ ಪಂತ್ ಮತ್ತು ಸೂರ್ಯಕುಮಾರ್ ರನ್ನು ಆಡಿಸಿ ಹಲವಾರು ಆರಂಭಿಕ ಸಂಯೋಜನೆಗಳನ್ನು ಪ್ರಯತ್ನಿಸಿತ್ತು. ಇದೀಗ ಮಹತ್ವದ ಟೂರ್ನಿಯಲ್ಲಿ ಟೀಂ ಇಂಡಿಯಾದ ಹಳೆಯ ಜೋಡಿ ರೋಹಿತ್-ರಾಹುಲ್ ಅಗ್ರಕ್ರಮಾಂಕದಲ್ಲಿ ಆಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದ ಕೊಹ್ಲಿ ಏಷ್ಯಾಕಪ್ ನಲ್ಲಿ ತಂಡಕ್ಕೆ ಮರಳಲಿದ್ದಾರೆ. ಕೊಹ್ಲಿ 3ನೇ ಕ್ರಮಾಂಕದಲ್ಲಿ ನೇರ ಪ್ರವೇಶ ಮಾಡುವ ನಿರೀಕ್ಷೆಯಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಪಕ್ಕಾ ಆಗಿದೆ. ಆರಂಭಿಕನಾಗಿ ರಾಹುಲ್ ಕಣಕ್ಕಿಳಿದರೆ, ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಪಂತ್ ಗೆ ಮತ್ತೊಬ್ಬ ಕೀಪರ್ ದಿನೇಶ್ ಕಾರ್ತಿಕ್ ರಿಂದ ಪ್ರಬಲ ಸ್ಪರ್ಧೆ ಇದೆ. ಕೊಹ್ಲಿ ಹಿಂದಿರುಗಿದ ನಂತರ ಪ್ಲೇಯಿಂಗ್ XI ನಲ್ಲಿ ಪಂತ್ ಮತ್ತು ಕಾರ್ತಿಕ್ ಇಬ್ಬರನ್ನೂ ಆಡಿಸುವುದು ಮೆನ್ ಇನ್ ಬ್ಲೂಗೆ ಕಷ್ಟವಾಗುತ್ತದೆ.
ಆಲ್‌ರೌಂಡರ್‌ಗಳು ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಭಾರತಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾರಂತಹ ಗುಣಮಟ್ಟದ ಆಲ್ರೌಂಡರ್ ಆಯ್ಕೆಗಳಿವೆ. ಆದಾಗ್ಯೂ, ಜಡೇಜಾ ಅವರ ಸ್ಥಾನ ತಂಡದಲ್ಲಿ ಪಕ್ಕಾ ಆಗಿಲ್ಲ. ಒಂದೊಮ್ಮೆ ಕಾರ್ತಿಕ್ ಅವರನ್ನು ಫಿನಿಶರ್ ಪಾತ್ರಕ್ಕೆ ಆಯ್ಕೆ ಮಾಡಿ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದರೆ ಜಡೇಜಾ ಹೊರಗುಳಿಯಬೇಕಾಗುತ್ತದೆ. ಆಗ ಭಾರತ ಕೇವಲ ಐದು ಬೌಲಿಂಗ್ ಆಯ್ಕೆಗಳೊಂದಿಗೆ (ಪಾಂಡ್ಯ ಸೇರಿದಂತೆ) ಆಡಬೇಕಾಗುತ್ತದೆ. ಮತ್ತೊಂದೆಡೆ ಸ್ಪಿನ್ನರ್ ಗಳ ಕೋಟದಲ್ಲಿ ಚಾಹಲ್ ಸ್ಥಾನ ಭದ್ರ. ಆದರೆ ಆಶ್ವಿನ್, ರವಿ ಬಿಷ್ಣೋಯಿ ಈ ಸ್ಥಾನಕ್ಕೆ ಪ್ರಬಲ ಫೈಪೋಟಿ ಒಡ್ಡುತ್ತಿದ್ದಾರೆ. ಮೂವರು ಸ್ಪಿನ್ನರ್‌ಗಳೊಂದಿಗೆ ಆಡುವುದು ಅಸಂಭವ. ಆದ್ದರಿಂದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಪಿನ್ನರ್‌ಗಳನ್ನು ನಿರ್ಧರಿಸುವುದು ಮ್ಯಾನೇಜ್‌ಮೆಂಟ್ ಮತ್ತು ರೋಹಿತ್‌ಗೆ ಕಠಿಣ ಕೆಲಸವಾಗಿ ಮಾರ್ಪಟ್ಟಿದೆ. ಇನ್ನು ಬೌಲರ್ ಗಳ ವಿಭಾಗದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲ. ಅನುಭವಿ ಭುವನೇಶ್ವರ್ ಕುಮಾರ್ ಹಾಗೂ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಸ್ಥಾನಗಳಿಸುವುದು ಬಹುತೇಕ ಖಚಿತವಾಗಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್(ಉಪ ನಾಯಕ) , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.