March 18, 2026
Wednesday, March 18, 2026
spot_img

ಕ್ರಿಫೋ 2K26 | ಎಲ್ಲಿ ಹೋಗ್ತೀರಾ ಅಂತ ಸೋಶಿಯಲ್‌ ಮೀಡಿಯಾಲಿ ಅಪ್ಡೇಟ್‌ ಮಾಡಿದ್ರೆ ಏನಾಗತ್ತೆ ಹೇಳಿದ್ರು ಅಡಿಷನಲ್ ಎಸ್ಪಿ!


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗಳೂರಿನ ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ಸಾರಥ್ಯದಲ್ಲಿ ವಿಭಿನ್ನವಾದ ಕಾರ್ಯಕ್ರಮವೊಂದು ನಡೆದಿದ್ದು ಎಲ್ಲರ ಗಮನ ಸೆಳೆಯಿತು.

ಕ್ರಿಫೋ 2K26 ಫಾರೆನ್ಸಿಕ್‌ ಫ್ಯೂಷನ್‌ ಹೆಸರಿನ ಈ ಕಾರ್ಯಕ್ರಮದಲ್ಲಿ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ತಂತ್ರಜ್ಞಾನಗಳ ಬಳಕೆಯ ಬಗೆಗಿನ ವಿಚಾರಗಳ ಬಗ್ಗೆ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬರಮಾಡಿಕೊಂಡು ಮಾಹಿತಿ ನೀಡಲಾಯಿತು.

ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಶನಿ ನಿಲಯ, ಐಕ್ಯೂ ಎಸಿ ಘಟಕ ಮತ್ತು ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್‌ ಸೈನ್ಸ್‌ ಸ್ನಾತಕ್ಕೋತರ ವಿಭಾಗದ ವತಿಯಿಂದ ದುಬೈನ ಎವಿಝೆಡ್‌ ಸೈಬರ್‌ ಸೆಕ್ಯುರಿಟಿ ಸೊಲ್ಯೂಷನ್ಸ್‌ ಮತ್ತು ಅವೆನ್ಝೋ ಸೈಬರ್‌ ಸೆಕ್ಯುರಿಟಿ ಸೊಲ್ಯೂಷನ್ಸ್‌ ಇಂಡಿಯಾ ಸಹಯೋಗದಲ್ಲಿ ಈ ʼಕ್ರಿಫೋ 2K26 ಫಾರೆನ್ಸಿಕ್‌ ಫ್ಯೂಷನ್‌ʼ ಅಂತಾರಾಷ್ಟ್ರೀಯ ಸಮ್ಮೇಳನ ನಡೆದಿದೆ.

ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ ಕುಮಾರ್ ಭೂಮರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಪರಾಧಗಳನ್ನು ಪತ್ತೆ ಹಚ್ಚುವುದಕ್ಕೆ ಈಗ ಆಧುನಿಕ ತಂತ್ರಜ್ಞಾನಗಳಿವೆ, ಫಾರೆನ್ಸಿಕ್‌ ಸೇರಿದಂತೆ ಇನ್ನಿತರ ಟೆಕ್ನಾಲಜಿಗಳ ಬಳಕೆಯಿಂದ ಅಪರಾಧ ಪ್ರಕರಣಗಳನ್ನು ಬೇಗ ಬೇಧಿಸಬಹುದು ಎಂದರು.

ಆಧುನಿಕ ತಂತ್ರಜ್ಞಾನಗಳ ಹೊರತಾಗಿಯೂ ಹಳೆಯ ಮಾದರಿಯ ತನಿಖಾ ಕ್ರಮಗಳನ್ನು ಎಂದಿಗೂ ಮರೆಯುವಂತಿಲ್ಲ. ಹಳೆಯ ತನಿಖಾ ಪದ್ಧತಿ ಮತ್ತು ಹೊಸ ತಂತ್ರಜ್ಞಾನದ ನೆರವಿನಿಂದ ಪ್ರಕರಣಗಳನ್ನು ಸುಲಭವಾಗಿ ಭೇದಿಸಬಹುದು. ಈ ನಿಟ್ಟಿನಲ್ಲಿ ಫಾರೆನ್ಸಿಕ್ ವಿಭಾಗದ ನೆರವು ಮಹತ್ವದ್ದಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳ ಮೂಲಕ ಆಗುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ನಾವು ಹಾಕುವ ಪೋಸ್ಟ್‌ಗಳು ಹೇಗೆ ಮನೆಯ ಸಂಪೂರ್ಣ ದರೋಡೆಗೆ ಕಾರಣವಾಗುತ್ತದೆ ಎಂಬುದನ್ನು ನೈಜ ಘಟನೆಯೊಂದಿಗೆ ವಿವರಿಸಿದರು.

ಚಿಕ್ಕಮಗಳೂರಿನಲ್ಲಿ ಮಹಿಳೆಯೊಬ್ಬರು ಗೋವಾಕ್ಕೆ ಹೋಗುವ ಬಗ್ಗೆ, ಅಲ್ಲಿ ಹೋದ ಬಳಿಕ ಎಲ್ಲಿದ್ದೇನೆ ಎಂದು ನಿತ್ಯ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕುತ್ತಿದ್ದರು. ಮನೆಯೊಡತಿಯ ಫೇಸ್‌ಬುಕ್ ಫಾಲೋ ಮಾಡುತ್ತಿದ ಕಳ್ಳ, ಮನೆಗೆ ನುಗ್ಗಿ ನಾಲ್ಕೈದು ದಿನಗಳ ಕಾಲ ಆ ಮನೆಯಲ್ಲಿ ಕಾಲ ಕಳೆದು, ನೆರೆಮನೆಯವರ ಗಮನಕ್ಕೂ ಬಾರದಂತೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ದೋಚಿದ್ದ. ಮನೆಯೊಡತಿ ಕುಟುಂಬ ಸಹಿತ ಮನೆಗೆ ಹಿಂತಿರುಗಿದಾಗ ಮನೆ ಸಂಪೂರ್ಣ ಖಾಲಿಯಾಗಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಎರಡು ದಿನಗಳ ಅವಧಿಯಲ್ಲಿ ಪತ್ತೆಹಚ್ಚಿ ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡರಾದರೂ ಕಳ್ಳ ಮಾತ್ರ ಫೇಸ್‌ಬುಕ್‌ನ ಸಹಾಯದಿಂದ ಅನಾಯಾಸವಾಗಿ ದರೋಡೆ ಮಾಡಲು ಸಾಧ್ಯವಾಗಿತ್ತು ಎಂದು ಅವರು ನೈಜ ಘಟನೆಯ ಬಗ್ಗೆ ವಿವರ ನೀಡಿದರು.

ಸಹ ಪ್ರಾಧ್ಯಾಪಕಿ ಸಿಸಿಲಿಯಾ ಎಸ್. ಗೋವಿಯಸ್ ಅಧ್ಯಕ್ಷತೆ ವಹಿಸಿದ್ದು, ಅವರು ಮಾತನಾಡಿ, ಅಪರಾಧ ಪತ್ತೆ ಕಾರ್ಯದಲ್ಲಿ ಫಾರೆನ್ಸಿಕ್ ವಿಭಾಗದ ನೆರವು ಮಹತ್ವದ್ದಾಗಿದೆ ಎಂದರು.

ದುಬೈನ ಎವಿಝಡ್ ಸೈಬರ ಸೆಕ್ಯೂರಿಟಿ ಸೊಲ್ಯೂಷನ್ಸ್ ಆಡಳಿತ ಪಾಲುದಾರ ಡಾ. ಅಬ್ದು ಯಾಸರ್, ಅವನ್ಝೋ ಸೈಬರ್ ಸೆಕ್ಯುರಿಟಿ ಸೊಲ್ಯೂಷನ್ಸ್ ಇಂಡಿಯಾದ ನಿರ್ದೇಶಕ, ಸಿಇಒ ಡಾ. ಅಜಿತ್ ಕುಮಾರ್ ಪಾರಕ್ಕಾಡ್, ವಿದ್ಯಾರ್ಥಿ ಸಂಯೋಜಕಿ ಕೀರ್ತನಾ ಲಾಲಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕಿ ಡಾ. ಸರಿತಾ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸಿಸ್ಟೆಂಟ್ ಪ್ರೊಫೆಸರ್ ಗಾಯತ್ರಿ ಕೆ.ಎಸ್. ಸ್ವಾಗತಿಸಿದರು. ಅಸಿಸ್ಟೆಂಟ್ ಪ್ರೊಫೆಸರ್ ಜೋಯೆಲ್‌ ಜೋಸೆಫ್ ವಂದಿಸಿದರು. ಶರ್ಲಿನ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.


Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !