ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರಾಗಿದೆ. ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿರುವುದರಿಂದ ರೇವಣ್ಣಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ಜಾಮೀನಿಗೆ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ನ್ಯಾಯಾಧೀಶರು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಪ್ರೀತ್ ಜೆ. ಅವರು ಆದೇಶ ಹೊರಡಿಸಿದ್ದಾರೆ. ಇಂದು ವಿಚಾರಣೆಗೆ ರೇವಣ್ಣ ಬರಿಗಾಲಲ್ಲೇ ಹಾಜರಾಗಿದ್ದರು.
ಗುರುವಾರ ಮಧ್ಯಂತರ ಜಾಮೀನು ನೀಡಿ ಶುಕ್ರವಾರಕ್ಕೆ (ಮೇ 17) ವಿಚಾರಣೆಯನ್ನು ಮುಂದೂಡಲಾಗಿತ್ತು. ಶುಕ್ರವಾರ ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಸೋಮವಾರಕ್ಕೆ (ಮೇ 20) ವಿಚಾರಣೆಯನ್ನು ಮುಂದೂಡಿದ್ದರು. ಇದೀಗ ಎರಡನೇ ಪ್ರಕರಣದಲ್ಲಿ ಅವರಿಗೆ ಜಾಮೀನು ಲಭ್ಯವಾಗಿದೆ.
ಚಾಮರಾಜನಗರದ ಸಂತ್ರಸ್ತೆಯ ಕಿಡ್‌ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಜಾಮೀನು ದೊರೆತಿತ್ತು.