ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಎನ್‌ಡಿಎ ಒಕ್ಕೂಟ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹಂಚಿಕೆ ಮಾಡಿದ್ದು, ಪ್ರಚಾರಕ್ಕೆ ತಯಾರಿ ನಡೆಸುತ್ತಿವೆ. ಆದರೆ ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಇನ್ನೂ ಅಂತಿಮಗೊಂಡಿಲ್ಲ.
ಈ ನಡುವೆಯೇ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಘೋಷಿಸಿದ್ದು ಸಾಕಷ್ಟು ಗೊಂದಲ ಏರ್ಪಟ್ಟಿದೆ. ಇದರ ಬೆನ್ನಲೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ವೀಕ್ಷಕ ಅಶೋಕ್ ಗೆಹ್ಲೋಟ್, ಬಿಹಾರ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲಾವರು ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ.
ಮೊದಲು ಇಬ್ಬರು ನಾಯಕರು ತೇಜಸ್ವಿ ಯಾದವ್ ಅವರನ್ನು ಭೇಟಿಯಾದರು, ಮೂವರು ನಾಯಕರು ಸುದೀರ್ಘ ಸಂಭಾಷಣೆ ನಡೆಸಿದರು. ತೇಜಸ್ವಿ ಇಬ್ಬರೂ ನಾಯಕರನ್ನ ಸುಮಾರು 54 ನಿಮಿಷಗಳ ಕಾಲ ಭೇಟಿಯಾದರು. ನಂತರ, ಅಶೋಕ್ ಗೆಹ್ಲೋಟ್, ಕೃಷ್ಣ ಅಲ್ಲಾವರು ಲಾಲು ಪ್ರಸಾದ್ ಅವರನ್ನು ರಾಬ್ರಿ ದೇವಿ ನಿವಾಸದಲ್ಲಿ ಭೇಟಿಯಾಗಿ 35 ನಿಮಿಷಗಳ ಚರ್ಚೆ ನಡೆಸಿದರು. ಈ ಸಭೆಯ ಬೆನ್ನಲ್ಲೇ ಮಹಾಮೈತ್ರಿಕೂಟದೊಳಗೆ ಎಲ್ಲವೂ ಸರಿಯಾಗಿದೆ. ಯಾವುದೇ ಸಮಸ್ಯೆಗಳಿಲ್ಲ. ಮುಂದಿನ 24 ಗಂಟೆಗಳಲ್ಲಿ ನಿಮಗೆ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಮಹಾಘಟಬಂಧನ್‌ನಲ್ಲಿ ಬಿಕ್ಕಟ್ಟು: 24 ಗಂಟೆಯಲ್ಲಿ ಸ್ಪಷ್ಟನೆ ಎಂದ ತೇಜಸ್ವಿ ಯಾದವ್

