ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಟ್‌ಬಾಲ್ ಜಗತ್ತಿನ ಅತ್ಯಂತ ಖ್ಯಾತಿ ಪಡೆದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಅವರ ಬಹುಕಾಲದ ಸಂಗಾತಿ, ಮಾಡೆಲ್ ಜಾರ್ಜಿನಾ ರೊಡ್ರಿಗಸ್ ಅವರ ಪ್ರೇಮಕಥೆ ಈಗ ನಿಶ್ಚಿತಾರ್ಥದ ಹಂತ ತಲುಪಿದೆ. ಸುಮಾರು ಒಂಬತ್ತು ವರ್ಷಗಳ ಪ್ರೀತಿಯ ನಂತರ, ರೊನಾಲ್ಡೋ 26 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ಉಂಗುರವನ್ನು ನೀಡುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.
ಈ ಜೋಡಿ ಮೊದಲ ಬಾರಿಗೆ 2016ರಲ್ಲಿ ಮ್ಯಾಡ್ರಿಡ್‌ನ ಗೂಚಿ ಬ್ರ್ಯಾಂಡ್ ಅಂಗಡಿಯಲ್ಲಿ ಭೇಟಿಯಾದರು. ಆ ಕ್ಷಣದಿಂದಲೇ ಅವರ ನಡುವೆ ಸ್ನೇಹದ ಬೆಳೆಯತೊಡಗಿದವು. 2017ರಲ್ಲಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಿದ ನಂತರ, ಇಬ್ಬರೂ ಒಟ್ಟಿಗೆ ಜೀವನ ನಡೆಸಿ, ಅನೇಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಅರ್ಜೆಂಟೀನಾದಲ್ಲಿ ಜನಿಸಿದ ಜಾರ್ಜಿನಾ, ಸ್ಪೇನ್‌ನ ಜಾಕಾದಲ್ಲಿ ಬೆಳೆದವರು. ಅವರು ಡ್ಯಾನ್ಸರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ನಂತರ ಮ್ಯಾಡ್ರಿಡ್‌ಗೆ ತೆರಳಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿದರು. ಇಂದಿಗೆ ಅವರು ಮಾಡೆಲಿಂಗ್ ಜೊತೆಗೆ ಹಲವು ಉದ್ಯಮಗಳ ಮಾಲಕಿಯಾಗಿದ್ದಾರೆ.
ಈ ನಿಶ್ಚಿತಾರ್ಥ ಸಮಾರಂಭದ ಮುಖ್ಯ ಆಕರ್ಷಣೆಯೇ 50 ಕ್ಯಾರಟ್ ತೂಕದ ಡೈಮಂಡ್ ಉಂಗುರ. ಇದರ ಬೆಲೆ ಸುಮಾರು 3 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಭಾರತೀಯ ಮೌಲ್ಯದಲ್ಲಿ 26 ಕೋಟಿ ರೂಪಾಯಿಗೂ ಅಧಿಕ. ಈ ಉಂಗುರವು ಕೇವಲ ಆಭರಣವಲ್ಲ, ಅವರ ಪ್ರೀತಿಯ ಪ್ರತೀಕವಾಗಿ ಉಳಿಯುವಂತದ್ದು.
ಈ ಜೋಡಿ ಈಗ ವಿವಾಹದತ್ತ ಹೆಜ್ಜೆ ಹಾಕಲಿದ್ದು, ಅಭಿಮಾನಿಗಳು ಮತ್ತು ಫುಟ್‌ಬಾಲ್ ಪ್ರೇಮಿಗಳು ಅವರ ಮುಂದಿನ ಜೀವನದ ಹಂತವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.