Friday, November 28, 2025

ಅತಿವೃಷ್ಟಿಯಿಂದ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ: 1,033 ಕೋಟಿ ರೂ. ಪರಿಹಾರ ಪ್ಯಾಕೇಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಈ ವರ್ಷ ಹೆಚ್ಚು ಮಳೆಯಿಂದಾಗಿ 14 ಲಕ್ಷ ಹೆಕ್ಟೇರ್‌ಗಳ ಬೆಳೆ ಹಾನಿಯಾಗಿದೆ. ರೈತರಿಗೆ ಪರಿಹಾರವಾಗಿ 1,033 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರಿಗೆ ಪರಿಹಾರ ನೀಡಬೇಕು. ನಾನು ಕಲಬುರಗಿ, ಯಾದಗಿರಿ ಮತ್ತು ಇತರ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ, ಅಲ್ಲಿ ಜೋಳ, ಕಬ್ಬು ಮತ್ತು ತೊಗರಿ ಬೆಳೆಗೆ ತೀವ್ರ ಹಾನಿಯಾಗಿದೆ.

ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅವರು ಇಲ್ಲಿಗೆ ಕೇಂದ್ರ ತಂಡವನ್ನು ಕಳಿಸಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ನೀಡುತ್ತಾರೆ ಎಂಬ ಭರವಸೆ ನಮಗಿದೆ. 17 ಲಕ್ಷ ಹೆಕ್ಟೇರ್‌ಗೆ ಆರ್ಥಿಕ ನೆರವು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಪ್ರಕಟಿಸಿದರು.

ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1033.60 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಇಂದು ಚಾಲನೆ ನೀಡಲಾಗಿದೆ.

ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇನ್‌ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದೆ. ಗರಿಷ್ಟ 2 ಹೆಕ್ಟೇರಿಗೆ ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ. 8500 ರಿಂದ ರೂ. 17 ಸಾವಿರ, ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.17 ಸಾವಿರದಿಂದ ರೂ.25,500 ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.22,500ರಿಂದ ರೂ. 31 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.

error: Content is protected !!