ಹೊಸದಿಗಂತ ವರದಿ, ಮದ್ದೂರು:
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿ ದಾಟುತ್ತಿದ್ದ ಜಿಂಕೆಯೊಂದು ಗಾಯಗೊಂಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಮಧ್ಯಾಹ್ನ ನಡೆದಿದೆ.
ತಾಲೂಕಿನ ನಿಡಘಟ್ಟದ ಗ್ರಾಮದ ಸಮೀಪ ಮಧ್ಯಾಹ್ನ ಸುಮಾರು 12.15ರ ಸಮಯದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಜಿಂಕೆಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಿಂದಾಗಿ ಜಿಂಕೆಯ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದು, ಈ ಮಾರ್ಗದಲ್ಲಿ ಬರುತ್ತಿದ್ದ ವಾಹನ ಸವಾರರು ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಮದ್ದೂರು ವಲಯ ಉಪ ಅರಣ್ಯಾಧಿಕಾರಿ ರವಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಜಿಂಕೆಯ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮದ್ದೂರಿನ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದರು. ಮದ್ದೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.