ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಪ್ರಮಾಣದ ಕಚ್ಚಾತೈಲ ಹೊತ್ತು ನವಮಂಗಳೂರು ಬಂದರಿಗೆ ಆಗಮಿಸಿರುವ ‘ಆಕ್ವಾ ಟೈಟನ್’ ಹಡಗಿನಿಂದ ಎಂಆರ್ಪಿಎಲ್ ತೈಲ ಸಂಸ್ಕರಣಾ ಘಟಕಕ್ಕೆ ತೈಲ ಪೂರೈಕೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ.
ರಷ್ಯಾದಿಂದ ಆಗಮಿಸಿರುವ ಈ ನೌಕೆಯಲ್ಲಿದ್ದ ಸುಮಾರು 96,000 ಮೆಟ್ರಿಕ್ ಟನ್ ಕಚ್ಚಾತೈಲವನ್ನು ಪೂರೈಸುವ ಈ ಪ್ರಕ್ರಿಯೆಯು ಇಂದು ಸಂಜೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ, ಇಂದು ನವಮಂಗಳೂರು ಬಂದರಿಗೆ ಆಗಮಿಸಿರುವ ‘ಪಿಕ್ಸಿಸ್ ಪಯೋನಿಯರ್’ ಹೆಸರಿನ ಎಲ್ಪಿಜಿ ಕಾರ್ಗೋ ಹಡಗಿನಿಂದ ಸರಕು ಇಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಅಮೆರಿಕದ ಟೆಕ್ಸಾಸ್ನಿಂದ ಹೊರಟಿದ್ದ ಈ ಹಡಗು 16,714 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತು ತಂದಿದ್ದು, ಬಂದರಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಎಲ್ಪಿಜಿ ಇಳಿಸುವ ಪ್ರಕ್ರಿಯೆ ಸಾಗುತ್ತಿದೆ. ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ ಮೊದಲ ಎಲ್ಪಿಜಿ ಹಡಗು ಇದಾಗಿದ್ದು, ಇಂಧನ ಪೂರೈಕೆಯ ದೃಷ್ಟಿಯಿಂದ ಈ ಕಾರ್ಯಾಚರಣೆಗಳು ಅತ್ಯಂತ ಪ್ರಮುಖವಾಗಿವೆ.



