October 18, 2026
Sunday, October 18, 2026
spot_img

ಪ್ರೀತಿ-ಮದುವೆ ನಾಟಕ ಸಾಕು, ಕಾಂಗ್ರೆಸ್ ದ್ರೋಹದ ಸಾಕ್ಷಿ ನನ್ನ ಬಳಿಯಿದೆ: ಹೆಚ್‌ಡಿಡಿ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

“ನಿಜವಾದ ದ್ರೋಹ ಮಾಡಿದ್ದು ಕಾಂಗ್ರೆಸ್ ಪಕ್ಷ, ನಾವಲ್ಲ!” ಹೀಗೆಂದು ಗುಡುಗುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೇರ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಖರ್ಗೆಯವರು ದೇವೇಗೌಡರ ಬಗ್ಗೆ ಲೇವಡಿ ಮಾಡುತ್ತಾ, “ಗೌಡರು ಕಾಂಗ್ರೆಸ್ ಜೊತೆ ಪ್ರೀತಿಯಲ್ಲಿದ್ದರು, ಆದರೆ ಮದುವೆ ಮಾತ್ರ ಮೋದಿ ಜೊತೆ ಮಾಡಿಕೊಂಡರು” ಎಂದು ಟೀಕಿಸಿದ್ದರು. ಈ ಮಾತಿನಿಂದ ಕೆರಳಿದ ದೊಡ್ಡಗೌಡರು, ಸದನದಲ್ಲಿ ತಾವು ಇಲ್ಲದ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

“ಕಾಂಗ್ರೆಸ್ ನಮ್ಮ ಪಕ್ಷಕ್ಕೆ ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ದ್ರೋಹ ಮಾಡಿದೆ. ಇದರ ಬಗ್ಗೆ ನಾನು ದಾಖಲೆ ಸಮೇತ ಮಾತನಾಡಬಲ್ಲೆ. ಖರ್ಗೆಯವರು ತಮ್ಮ ಪಕ್ಷದ ತಪ್ಪುಗಳನ್ನು ಮುಚ್ಚಿ ಹಾಕಲು ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ,” ಎಂದು ಹರಿಹಾಯ್ದರು.

ಕರ್ನಾಟಕದ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು ಅಂದು ಹೇಗೆ ನಡೆದುಕೊಂಡರು ಎಂಬುದನ್ನು ಗೌಡರು ನೆನಪಿಸಿದರು. “ನಿಜಲಿಂಗಪ್ಪ, ದೇವರಾಜ ಅರಸು ಹಾಗೂ ಬಂಗಾರಪ್ಪ ಅವರಿಗೆ ಏನಾಯಿತು ಎಂಬುದು ಖರ್ಗೆಯವರಿಗೂ ಚೆನ್ನಾಗಿ ಗೊತ್ತು. ಅವರೆಲ್ಲ ಹೇಗೆ ಅಧಿಕಾರ ಕಳೆದುಕೊಂಡರು? ಆ ದ್ರೋಹದ ಆಟಗಳಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ,” ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.

Must Read